ದೊಡ್ಡಕೋಲಿಗದಲ್ಲಿ ಗುಂಪು ಘರ್ಷಣೆ: ನಾಲ್ವರಿಗೆ ಗಾಯ
ಸೂಲಿಬೆಲೆ: ಇಲ್ಲಿಗೆ ಸಮೀಪದ ದೊಡ್ಡಕೋಲಿಗ ಗ್ರಾಮದಲ್ಲಿ ಜಮೀನುಗಳ ಮಧ್ಯೆ ದಾರಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಭಾನುವಾರ ಘರ್ಷಣೆ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಗಾಯಗೊಂಡ ವ್ಯಕ್ತಿಗಳು ಹೊಸಕೋಟೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದಲ್ಲಿರುವ ಎರಡು ಗುಂಪುಗಳ ಮಧ್ಯೆ ಸರ್ವೇ ನಂ.84 ಹಾಗೂ 62-1 ಜಮೀನು ಬಳಿಯಿಂದ ಹಾದು ಹೋಗಿರುವ ದಾರಿ ವಿಚಾರವಾಗಿ ಕಳೆದ ಕೆಲ ವರ್ಷಗಳಿಂದ ವಿವಾದವಿತ್ತು. ಈ ವಿಚಾರವನ್ನು ಬಗೆಹರಿಸಲು ಕೆಲ ವರ್ಷಗಳ ಹಿಂದೆಯೇ ಅಂದಿನ ತಹಸೀಲ್ದಾರ್ ದಯಾನಂದ ಭಂಡಾರಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದರು ಎನ್ನಲಾಗಿದೆ.
ಭಾನುವಾರ ಮತ್ತೆ ಇದೇ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದು ನಾಲ್ವರು ಗಾಯಗೊಂಡಿದ್ದಾರೆ. ಇದರಲ್ಲಿ ಕುಮಾರ್ ಎಂಬುವವರಿಗೆ ಗಂಭೀರ ಸ್ವರೂಪದ ಗಾಯವಾಗಿದೆ ಎನ್ನಲಾಗಿದೆ. ಘಟನೆಯ ಸಂಬಂಧ ದೊಡ್ಡಸುಬ್ಬಣ್ಣ ಮತ್ತು ಮಂಜುನಾಥ ಎಂಬವರು ಪ್ರತ್ಯೇಕ ದೂರುಗಳನ್ನು ನೀಡಿದ್ದು, ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ 12 ಜನರ ಮೇಲೆ ಪ್ರಕರಣ ದಾಖಲಾಗಿದೆ.