ಅಣಕು ಶವ, ಚಟ್ಟ ಬಿಟ್ಟು ಹೋದರು...
ರಾಮನಗರ: ಅಪರಿಚಿತ ಶವ ಸಿಕ್ಕಾಗ ಅಂತ್ಯ ಸಂಸ್ಕಾರ ಮಾಡುವುದು ಪೊಲೀಸರ ಕರ್ಮವಾಗಿರುತ್ತದೆ. ಇಷ್ಟು ಸಾಲದೆನ್ನುವಂತೆ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಟ್ಟು ಹೋದ ಜಯಲಲಿತಾ ಅಣಕು ಶವ, ಚಟ್ಟದ ವಿಲೇವಾರಿ ಕೂಡ ಪೊಲೀಸರ ಹೆಗಲಿಗೆ ಬಿತ್ತು.
ಕಾವೇರಿ ನದಿ ನೀರು ಹಂಚಿಕೆ ವಿವಾದ ಹಿನ್ನೆಲೆಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಅಣಕು ಶವಯಾತ್ರೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಖ್ಯ ದ್ವಾರದಲ್ಲೇ ಅಣಕು ಶವವನ್ನಿಟ್ಟುಕೊಂಡು, ಪ್ರತಿಭಟಿಸಿದರು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ನಂತರ ಅಣಕು ಶವ, ಚಟ್ಟವನ್ನು ಬಿಟ್ಟು ಹೋದರು.
ಸರ್ಕಲ್ ಇನ್ಸ್‌ಪೆಕ್ಟರ್ ಪುರುಷೋತ್ತ್‌ಮ್ ನೇತೃತ್ವದಲ್ಲಿ ಸಿಬ್ಬಂದಿಯು ಬಂದೋಬಸ್ತ್‌ಗೆ ನಿಯೋಜಿಸಲ್ಪಟ್ಟಿದ್ದರು. ಪ್ರತಿಭಟನಾಕಾರರ ನಿರ್ಗಮನ ನಂತರ ಪೊಲೀಸ್ ಸಿಬ್ಬಂದಿಯು ಅಣಕು ಶವ, ಚಟ್ಟವನ್ನು ಹೊತ್ತೊಯ್ದು ಕಂದಾಯ ಭವನದ ಹೊರಗಿನ ಕಸದ ರಾಶಿ ಮೇಲೆಸೆದರು. ತಮಗೆ ಇದ್ಯಾವ ಕರ್ಮ ಎನ್ನುತ್ತಾ ಅವರ ಗೊಣಗಾಟ ನಡೆದಿತ್ತು.