ಬೊಮ್ಮನಹಳ್ಳಿ ಕ್ಷೇತ್ರ ಅಭಿವೃದ್ಧಿಯೇ ನನ್ನ ಗುರಿ: ಸತೀಶ್ ರೆಡ್ಡಿ ಘೋಷಣೆ
ಆನೇಕಲ್: ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯಲ್ಲಿ ಅಹರ್ನಿಷಿ ತೊಡಗಿಸಿಕೊಂಡಿದ್ದು ಬಿಜೆಪಿ ಸರ್ಕಾರದ ಎಲ್ಲ ಯೋಜನೆಗಳೂ ಅರ್ಹರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಶಾಸಕ ಎಂ. ಸತೀಶ್ ರೆಡ್ಡಿ ತಿಳಿಸಿದ್ದಾರೆ.
ಅವರು ಹೆಚ್‌ಎಸ್‌ಆರ್ ಲೇಔಟ್‌ನ 3 ಮತ್ತು 4ನೇ ಸೆಕ್ಟರ್‌ಗಳ ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿ ಹೊಸ ಬಡಾವಣೆಗಳಿಗೆ ಮೂಲ ಸೌಕರ್ಯ ಒದಗಿಸುವುದು ನನ್ನ ಆದ್ಯತೆಯ ಕೆಲಸವಾಗಿದೆ. ನಗರದ ಹೊರ ವಲಯಗಳಗೆ ಎಲ್ಲ ರೀತಿಯ ಮೂಲ ಸವಲತ್ತು ನೀಡಿದಲ್ಲಿ ನಗರ ಪ್ರದೇಶದ ಜನ ಸಂದಣಿ ಕಡಿಮೆಯಾಗುತ್ತದೆ.
ಕಾರ್ಮಿಕರು ನೌಕರರೇ ಹೆಚ್ಚಾಗಿ ವಾಸಿಸುವ ಜನಪ್ರದೇಶದ ಬಹುತೇಕ ಎಲ್ಲ ವಾರ್ಡುಗಳಿಗೆ ಕಾವೇರಿ ಕುಡಿಯುವ ನೀರನ್ನು ಒದಗಿಸಲಾಗಿದೆ. ರಸ್ತೆ ಆಗಲೀಕರಣ, ಏಕ ಮುಖ ಸಂಚಾರ, ಅಂಡರ್ ಪಾಸ್‌ಗಳ ನಿರ್ಮಾಣ ತೃಪ್ತಿ ನೀಡಿದ್ದರ ವಾಹನ ದಟ್ಟಣೆ ಸರಿಪಡಿಸಲು ಕ್ರಮ ವಹಿಸಲಾಗಿದೆ. ಅಧಿಕಾರಿಗಳ ಸಭೆಯಲ್ಲಿ ನಿರ್ದಿಷ್ಟ ಸೂಚನೆಗಳು ನೀಡಿದ್ದು ಕಾರ್ಯರೂಪಕ್ಕೆ ಬರಲಿದೆ ಎಂದರು.
ಆರ್‌ಎಸ್‌ಎಸ್‌ನ ನಿಷ್ಠಾವಂತ ಹಾಗೂ ಪ್ರಾಮಾಣಿಕ ಕಾರ್ಯಕರ್ತನಾದ ನನ್ನನ್ನು ಶಾಸಕನನ್ನಾಗಿಸಿ ಜನತೆಯ ಸೇವೆಗೆ ಅವಕಾಶ ಮಾಡಿಕೊಟ್ಟ ತವರು ಮನೆ ಬಿಜೆಪಿ. ಹತಾಶ ಮನಸ್ಸಿನ ರಾಜಕಾರಣಿಗಳು ಬಿಜೆಪಿ ತೊರೆಯುವುದಾಗಿ ಗಾಳಿ ಸುದ್ದಿ ತೇಲಿ ಬಿಟ್ಟಿದ್ದಾರೆ. ಬಿಜೆಪಿ ತೊರೆಯುವ ಮಾತೇ ಇಲ್ಲ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸುವುದಾಗಿ ತಿಳಿಸಿದ ಅವರು ಜನತೆಯ ಆಶೀರ್ವಾದ ಬಲದಿಂದ ಮತ್ತೆ ಆರಿಸಿ ಬರುವೆ ಎಂದಿದ್ದಾರೆ.