ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಅರ್ಜಿ (ಸುದ್ದಿ ಸಂಕ್ಷೇಪ)
ದೊಡ್ಡಬಳ್ಳಾಪುರ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೂಲಕ ದೊಡ್ಡಬಳ್ಳಾಪುರದ ಕೊಡಿಗೇಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 2013-14ನೇ ಸಾಲಿಗೆ 6ನೇ ತರಗತಿ ಪ್ರವೇಶ ಬಯಸುವ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಬೇಕಿದೆ. ಈ ಪ್ರಕ್ರಿಯೆಗೆ ಒಳಪಡುವ ಪರೀಕ್ಷೆಯನ್ನು ಮಾ.24ರಂದು ದೊಡ್ಡಬಳ್ಳಾಪುರ ತಾಲೂಕು ಕೇಂದ್ರದಲ್ಲಿ ಏರ್ಪಡಿಸಲಾಗಿದೆ. ಈ ಬಗ್ಗೆ ಬಡ ಗ್ರಾಮೀಣ ಪ್ರತಿಭಾನ್ವಿತ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಫೆ.4ರಿಂದ ಫೆ.25ರವರೆಗೆ ವಿತರಣೆ ಮಾಡಲಾಗುತ್ತಿದೆ. ಅರ್ಜಿಗಳು ಸಂಬಂಧಪಟ್ಟ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು, ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ದೊರೆಯಲಿವೆ.
ಶ್ರೀಪುರಂದರ ಜಯಂತ್ಯುತ್ಸವ
ರಾಮನಗರ: ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಂದಾಯ ಭವನದಲ್ಲಿ ಸೋಮವಾರ ಶ್ರೀಪುರಂದರ ಜಯಂತ್ಯುತ್ಸವ ನಡೆಯಿತು. ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಶ್ರೀಪುರಂದರದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಉಪ ವಿಭಾಗಾಧಿಕಾರಿ ಡಾ.ಸಿ.ವಿ.ಸ್ನೇಹಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಪಡಿತರ ಚೀಟಿಗಳ ಮಾಹಿತಿ ಪ್ರಕಟ
ರಾಮನಗರ: ತಾಲೂಕು ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಪಡಿತರ ಚೀಟಿಗಳು, ರದ್ದಾದ ಪಡಿತರ ಚೀಟಿಗಳು ಮತ್ತು ನಿಲಂಬನೆಯಲ್ಲಿರುವ ಪಡಿತರ ಚೀಟಿಗಳ ಮಾಹಿತಿಯನ್ನು ಸಂಬಂಧಪಟ್ಟ ಗ್ರಾಪಂ ಕಚೇರಿಗಳಲ್ಲಿ ಸಾರ್ವಜನಿಕರ ಗಮನಕ್ಕಾಗಿ ಪ್ರಕಟಿಸಲಾಗಿದೆ. ಸಾರ್ವಜನಿಕರು ಸದರಿ ಪಟ್ಟಿಯನ್ನು ಪರಿಶೀಲಿಸಿ, ಲೋಪದೋಷಗಳಿದ್ದಲ್ಲಿ ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರ್ ಕಚೇರಿಯ ಆಹಾರ ಶಾಖೆಯನ್ನು ಸಂಪರ್ಕಿಸಲು ತಿಳಿಸಿದೆ.
ನಾಳೆ ಪ್ರಗತಿ ಪರಿಶೀಲನಾ ಸಭೆ
ರಾಮನಗರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ಮುದ್ದುರಾಜ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ಫೆ. 13ರ ಬೆಳಗ್ಗೆ 11ಕ್ಕೆ ಜಿಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ.
ಫಸಲು ವಿಲೇವಾರಿಗೆ ಟೆಂಡರ್
ರಾಮನಗರ: ಚನ್ನಪಟ್ಟಣದ ಬೈರಾಪಟ್ಟಣ ತೋಟಗಾರಿಕೆ ಕ್ಷೇತ್ರದ 2013ನೇ ಸಾಲಿನ ಮೊದಲನೇ ಅವಧಿಯ ಸಪೋಟ ಮತ್ತು ಪೂರ್ಣ ಅವಧಿಯ ತೆಂಗು ಮತ್ತು ಹಲಸು ಫಸಲುಗಳ ವಿಲೇವಾರಿಗೆ ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ಸಲ್ಲಿಸಲು ಫೆ.15ರ (ಮಧ್ಯಾಹ್ನ 1.30ರೊಳಗೆ) ಕೊನೆಯ ದಿನವಾಗಿರುತ್ತದೆ. ಟೆಂಡರನ್ನು ಅಂದೇ ತೋಟಗಾರಿಕಾ ಉಪನಿರ್ದೇಶಕರು, ಜಿ.ಪಂ ಭವನ, 1ನೇ ಮಹಡಿ, ರಾಮನಗರ ಇಲ್ಲಿ ತೆರೆಯಲಾಗುವುದು. ಮಾಹಿತಿಗೆ ದೂ. 080-27204327 ಸಂಪರ್ಕಿಸಬಹುದು.