ಸಾರ್ವತ್ರಿಕ ಪಡಿತರ ವ್ಯವಸ್ಥೆ ರೂಪಿಸಲು ಒತ್ತಾಯಿಸಿ ಸಹಿ ಸಂಗ್ರಹ ಚಳವಳಿ
ಸೂಲಿಬೆಲೆ: ಎಪಿಎಲ್- ಬಿಪಿಎಲ್ ಎಂದು ವಿಂಗಡಿಸುವುದನ್ನು ಕೈ ಬಿಟ್ಟು ಸಾರ್ವತ್ರಿಕವಾದ ವಿತರಣಾ ವ್ಯವಸ್ಥೆ ರೂಪಿಸುವಂತೆ ಒತ್ತಾಯಿಸಿ ಹೊಸಕೋಟೆ ತಾಲೂಕು ಡಿವೈಎಫ್ಐ ಸಂಘಟನೆಯಿಂದ ಸೂಲಿಬೆಲೆ ಸಂತೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಚಳವಳಿಯ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಸೂ.ರಂ ರಾಮಯ್ಯ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಆಹಾರ ಪದಾರ್ಥಗಳ ಬೆಲೆಗಳು ರಾಕೆಟ್ ವೇಗದಲ್ಲಿ ಏರುತ್ತಿದೆ. ಇದಕ್ಕೆ ಕಾರಣ ಕೃಷಿ ಸಬ್ಸಿಡಿಗಳ ಕಡಿತ ಹಾಗೂ ನೀರಿನ ಅಭಾವದಿಂದಾಗಿ ಆಹಾರ ಉತ್ಪಾದನೆ ಒಂದೇ ಸಮನೆ ಕುಸಿಯುತ್ತಿದೆ. ಕೇಂದ್ರ ಸರ್ಕಾರ ಶೇ.70 ರಷ್ಟು ಜನರನ್ನು ಪಡಿತರ ವ್ಯವಸ್ಥೆಯಿಂದ ಹೊರಹಾಕಲು ನೂತನ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತರುತ್ತಿದೆ. ಇದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಡಿವೈಎಫ್ಐ ಕಾರ್ಯದರ್ಶಿ ಮೋಹನ್ ಬಾಬು ಮಾತನಾಡಿ, ಕೇಂದ್ರ ಸರ್ಕಾರ ಪಡಿತರ ವ್ಯವಸ್ಥೆಯಲ್ಲಿ ಅನುಸರಿಸುತ್ತಿರುವ ಇಬ್ಬಂದಿ ನೀತಿಯನ್ನು ಕೈಬಿಡಬೇಕು. ಬಡವರಿಗೆ ಅಗತ್ಯವಾಗಿರುವ ಆಹಾರ ಭದ್ರತೆಯನ್ನು ನೀಡಲು ಮನಸ್ಸಿಲ್ಲ. ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೆ ತರಲು ಒತ್ತಾಯಿಸಿ ನಡೆಸುತ್ತಿರುವ ಸಹಿ ಸಂಗ್ರಹ ಚಳವಳಿಯಲ್ಲಿ ಸಾರ್ವಜನಿಕರು ಭಾಗವಹಿಸಿ ಬೆಂಬಲಿಸಬೇಕು ಎಂದು ಕರೆಯಿತ್ತರು. ಪದಾಧಿಕಾರಿಗಳಾದ ನರಸಿಂಹಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.