ಮರಕ್ಕೆ ವಾಹನ ಡಿಕ್ಕಿ: ವ್ಯಕ್ತ್ತಿ ಸಾವು
ಕನಕಪುರ: ಕನಕಪುರ ತಾಲೂಕು ಕೋಡಿಹಳ್ಳಿ ಹೋಬಳಿ ಟಿ.ಗೊಲ್ಲಹಳ್ಳಿ ಗ್ರಾಮದ ಸಮೀಪ ದ್ವಿಚಕ್ರ ವಾಹನದ ಸವಾರನೊಬ್ಬ ನಿಯಂತ್ರಣ ತಪ್ಪಿ ರಸ್ತೆಬದಿಯ ಮರಕ್ಕೆ ಡಿಕ್ಕಿಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟು ಮತ್ತೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ಕೊಕ್ಕರೆಹೊಸಹಳ್ಳಿ ಗ್ರಾಮದ ಶಿವಕುಮಾರ್ (28)ಎಂದು ಗುರುತಿಸಲಾಗಿದೆ. ಇದೇ ವಾಹನದಲ್ಲಿದ್ದ ಗುಂಡ (23) ತೀವ್ರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ಸೇರಿಸಲಾಗಿದೆ. ನಿನ್ನೆ ರಾತ್ರಿ ಕೋಡಿಹಳ್ಳಿಯಿಂದ ಕೊಕ್ಕರೆಹೊಸಹಳ್ಳಿಗೆ ಹೋಗುತ್ತಿರುವ ಸಮಯದಲ್ಲಿ ಮಾರ್ಗ ಮಧ್ಯದ ಟಿ.ಹೊಸಹಳ್ಳಿ ಸಮೀಪ ಅಪಘಾತ ಸಂಭವಿಸಿದೆ. ಕೋಡಿಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತನ ಶವವನ್ನು ರಾಜರಾಜೇಶ್ವರಿ ನಗರದ ಶವಾಗಾರದಲ್ಲಿ ಇರಿಸಲಾಗಿದೆ.
ಡಿಕ್ಕಿ: ಬೈಕ್ ಸವಾರ ಸಾವು
ರಾಮನಗರ: ಬೈಕ್ ಸವಾರನಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಅಚ್ಚಲು ಗ್ರಾಮದ ಬಳಿ ನಡೆದಿದೆ. ತಾಲೂಕಿನ ಅಚ್ಚಲು ದೊಡ್ಡಿ ಗ್ರಾಮದ ಕೃಷ್ಣಪ್ಪ(32) ಮೃತ ಪಟ್ಟ ವ್ಯಕ್ತಿ. ಸೋಮವಾರ ರಾತ್ರಿ 8ರ ಸುಮಾರಿಗೆ ಟಿವಿಎಸ್ ಮೊಪೆಡ್ನಲ್ಲಿ ರಾಮನಗರ-ಕನಕಪುರ ರಸ್ತೆಯಲ್ಲಿ ಅಚ್ಚಲು ಬಳಿ ಸಾಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ಕೃಷ್ಣಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಲಾರಿ ಆಯತಪ್ಪಿ ಹೊಟೇಲ್ ಕಾಂಪೌಂಡ್ಗೆ ಡಿಕ್ಕಿ
ಚನ್ನಪಟ್ಟಣ: ಮರಳು ಲಾರಿಯೊಂದು ಆಯತಪ್ಪಿ ಹೋಟೆಲ್ ಕಾಂಪೌಂಡ್ಗೆ ಡಿಕ್ಕಿ ಹೊಡೆದ ಘಟನೆ ತಾಲೂಕಿನ ಮುದುಗೆರೆ ಸಮೀಪದ ಶಿವಳ್ಳಿ ರೆಸ್ಟೋರೆಂಟ್ ಬಳಿ ನಡೆದಿದೆ.
ಮೈಸೂರು ಕಡೆಯಿಂದ ಮರಳು ತುಂಬಿಕೊಂಡು ಬಂದ ಲಾರಿ ಶಿವಳ್ಳಿ ರೆಸ್ಟೋರೆಂಟ್ ಬಳಿ ಅಂಗಡಿ ಮಳಿಗೆಗಳಿದ್ದ ಕಡೆಗೆ ನುಗ್ಗಿ ಕಾಂಪೌಂಡ್ ಕೆಡವಿ, ಜಾಹೀರಾತು ಫಲಕಕ್ಕೆ ಡಿಕ್ಕಿ ಹೊಡೆದು ನಿಂತಿದೆ.
ಘಟನೆಯಲ್ಲಿ ಚಾಲಕ ಹಾಗೂ ನಿರ್ವಾಹಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.