ಸರ್ಕಾರಿ ವೈದ್ಯರು ಕೆಲಸಕ್ಕೆ ಹಾಜರು
ರಾಮನಗರ: ಮುಷ್ಕರವನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಿದ ಸರ್ಕಾರಿ ವೈದ್ಯರು ಮಂಗಳವಾರ ಬೆಳಗ್ಗೆಯಿಂದಲೇ ಕರ್ತವ್ಯಕ್ಕೆ ಹಾಜರಾದರು.
ಎಂದಿನಂತೆ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ, ಶುಶ್ರೂಷೆ ಮುಂದುವರೆಯಿತು.
ರಾಮನಗರ ಜಿಲ್ಲಾಸ್ಪತ್ರೆ, ಚನ್ನಪಟ್ಟಣ, ಮಾಗಡಿ, ಕನಕಪುರ ಸಾರ್ವಜನಿಕ ಆಸ್ಪತ್ರೆಗಳು, ಗ್ರಾಮೀಣ ಭಾಗದ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೇಕಡ 70ಕ್ಕೂ ಹೆಚ್ಚು ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದರು.
ಬೆಳಗ್ಗೆಯಷ್ಟೇ ವೈದ್ಯರು ಸಂಪು ಅಂತ್ಯಗೊಳಿಸಿದ್ದು, ಬೆಂಗಳೂರು ಮುಷ್ಕರದಲ್ಲಿ ಭಾಗಿಯಾಗಿದ್ದ ಕೆಲ ವೈದ್ಯರು ಇಂದೂ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಮುಷ್ಕರ ಅಂತ್ಯದ ಮಾಹಿತಿ ಇಲ್ಲದ ಕಾರಣ ಸರ್ಕಾರಿ ಆಸ್ಪತ್ರೆಗಳಲ್ಲಿ ಬೇರೆ ದಿನಗಳಿಗೆ ಹೋಲಿಸಿದರೆ ರೋಗಿಗಳ ಸಂಖ್ಯೆ ವಿರಳವಾಗಿತ್ತು.
ಪರದಾಟ ಕೊನೆಗೂ ಅಂತ್ಯ: ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವೈದ್ಯರು ಮುಷ್ಕರದ ಹಾದಿ ಹಿಡಿದಿದ್ದ ಹಿನ್ನೆಲೆಯಲ್ಲಿ ರೋಗಿಗಳು ಪರದಾಡುವಂತಾಗಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯ ದೊರಕದ ಹಿನ್ನೆಲೆಯಲ್ಲಿ ನರ್ಸಿಂಗ್ ಹೋಂ, ಕ್ಲಿನಿಕ್ಗಳಲ್ಲಿ ರೋಗಿಗಳ ನೂಕುನುಗ್ಗಲು ಕಂಡು ಬಂತು.
ಬಡ ರೋಗಿಗಳು ಖಾಸಗಿ ವೈದ್ಯರ ಬಳಿ ಚಿಕಿತ್ಸೆಗಾಗಿ ದುಬಾರಿ ವೆಚ್ಚ ತೆತ್ತರು. ಸಕಾಲಕ್ಕೆ ವೈದ್ಯಕೀಯ ಸೌಲಭ್ಯ ದೊರಕದೆ ಕೆಲವರು ತೊಂದರೆ ಅನುಭವಿಸಿದ್ದೂ ಉಂಟು. ಇದರಿಂದಾಗಿ ಸರ್ಕಾರ ಮತ್ತು ವೈದ್ಯರಿಗೆ ಹಿಡಿಶಾಪ ಹಾಕಿದ್ದೂ ಇದೆ.
ಸಹನೆಯ ಕಟ್ಟೆಯೊಡೆದು: ವೈದ್ಯರ ಮುಷ್ಕರದ ಪರಿಣಾಮ ಸಹನೆಯ ಕಟ್ಟೆಯೊಡೆದು, ಸಾರ್ವಜನಿಕರು ಪ್ರತಿಭಟನೆಗೆ ಇಳಿದ ನಿದರ್ಶನವೂ ಇದೆ. ಜಿಲ್ಲೆಯ ಮಾಗಡಿ ಸರ್ಕಾರಿ ಆಸ್ಪತ್ರೆ ಎದುರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾರ್ವಜನಿಕರು ಸೋಮವಾರ ಪ್ರತಿಭಟನೆ ನಡೆಸಿದ್ದರು. ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ರೋಗಿಗಳ ಚಿಕಿತ್ಸೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಎಲ್ಲೆಡೆ ಸಾರ್ವಜನಿಕರು ಒತ್ತಡ ಹೇರಿದ್ದರು. ಪ್ರತಿಭಟನೆ ಹೀಗೇ ಮುಂದುವರೆದಿದ್ದಲ್ಲಿ ಎಲ್ಲೆಡೆ ಪ್ರತಿಭಟನೆ ವ್ಯಕ್ತವಾಗುವ ಸಂಭವವಿತ್ತು. ಅಂತೂ ಇಂತು ವೈದ್ಯರು ಸಂಪು ನಿಲ್ಲಿಸಿದ್ದಾರೆ.
ತಾತ್ಕಾಲಿಕ ಅಂತ್ಯವಷ್ಟೇ: ಮುಷ್ಕರನಿರತರ ಬೇಡಿಕೆಗಳ ಈಡೇರಿಕೆ ಸಂಬಂಧ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬೇಡಿಕೆಗಳ ಪರಿಶೀಲನೆಗಾಗಿ ಉಪ ಮುಖ್ಯಮಂತ್ರಿ ಆರ್.ಅಶೋಕ್ನೇತಣತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ. ಹೀಗಾಗಿ ವೈದ್ಯರು ಮುಷ್ಕರ ನಿಲ್ಲಿಸಿದ್ದು, ಕರ್ತವ್ಯಕ್ಕೆ ಮರಳಿದ್ದಾರೆ ಎಂದು ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ವಿಜಯ ನರಸಿಂಹ ತಿಳಿಸಿದ್ದಾರೆ. ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಆರೋಗ್ಯ ಇಲಾಖೆ ನೌಕರರು ಮತ್ತು ಅಧಿಕಾರಿಗಳ ಸಂಘದ ಪದಾಧಿಕಾರಿಗಳೊಂದಿಗೆ ಸರ್ಕಾರದ ಮಾತುಕತೆ ಬಹುತೇಕ ಫಲಪ್ರದವಾಗಿದೆ. ಹೀಗಾಗಿ 29 ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿ, ನಡೆಸಿಕೊಂಡು ಬಂದಿದ್ದ ಹೋರಾಟಕ್ಕೆ ಕೊನೆಗೂ ಯಶಸ್ಸು ಸಿಕ್ಕಂತಾಗಿದೆ. ಒಂದು ವಾರದಲ್ಲಿ ಬಹುತೇಕ ಬೇಡಿಕೆಗಳು ಈಡೇರುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.