ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಯೋಗ್ಯ ರಾಜಕಾರಣಿಗಳಿಂದ ಕೃಷಿಕರಿಗೆ ವಂಚನೆ

Rashmi Kasaragodu
Updated On : 14 Feb 2013, 12:29 pm

ದೊಡ್ಡಬಳ್ಳಾಪುರ:  ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬುಧವಾರ ತಾಲೂಕಿನ ತಪಸೀಹಳ್ಳಿಯ ಪ್ರಗತಿಪರ ರೈತ ಸದಾನಂದ ಅವರ ಸಾವಯವ ಕೃಷಿ ತೋಟ, ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರ ಮತ್ತು ಜೈವಿಕ ಅನಿಲ ಘಟಕಗಳ ವೀಕ್ಷಣೆ ಮತ್ತು ರೈತರೊಂದಿಗೆ ಅಪ್ಪಟ ಮಣ್ಣಿನ ಮಗನಾಗಿ ಮಾತುಕತೆಯಲ್ಲಿ ನಿರತರಾಗಿದ್ದರು.
ಕೃಷಿ ಪದ್ಧತಿಗಳ ಮಾರ್ಪಾಟು, ಹೊಸ ಪ್ರಯೋಗಗಳ ಕುರಿತ ಚಿಂತನೆ, ಪ್ರಾಯೋಗಿಕ ಅನುಷ್ಠಾನ, ಬರದ ನಡುವೆಯೂ ಪ್ರಗತಿಪರ ಕೃಷಿಯ ತಂತ್ರಗಾರಿಕೆ, ಮಿತ ಸಂಪನ್ಮೂಲಗಳ ಬಳಕೆಯಿಂದ ಲಾಭದಾಯಕ ಕೃಷಿ, ಸ್ಥಳೀಯ ಮಾರುಕಟ್ಟೆ, ಹೊಸತನದ ವ್ಯವಸಾಯ ಮಾರ್ಗಗಳ ಕುರಿತು ಗಂಭೀರ ಮಾತುಕತೆ ಮತ್ತು ರೈತರ ಅನುಭವಗಳ ಮುಕ್ತ ಅನಾವರಣಕ್ಕೆ ತಮ್ಮ ಭೇಟಿಯಲ್ಲಿ ಅವರು ಮಹತ್ವ ನೀಡಿದ್ದರು.
ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಯೋಗ್ಯ ರಾಜಕಾರಣಿಗಳಿಂದ ಕೃಷಿಕರಿಗೆ ನಿರಂತರ ವಂಚನೆಯಾಗುತ್ತಿದೆ. ನೀರು-ಗಾಳಿ ಇಲ್ಲದಿದ್ರೆ ಬದುಕೋದು ಕಷ್ಟ. ಕೃಷಿಕರ ಕಷ್ಟ ಮಣ್ಣಿನ ಸ್ಪರ್ಶವೇ ಇಲ್ಲದೆ ಆ ಜನಕ್ಕೇನು ಗೊತ್ತು? ನಮ್ಮಲ್ಲಿರೋ ಬಹುತೇಕ ರಾಜಕಾರಣಿಗಳು ಕೃಷಿ ವಿಚಾರದಲ್ಲಿ ವಿದ್ಯಾವಂತ ಮೂರ್ಖರು ಎಂದು ಜರಿದರು.
ಈಗ ಇಡೀ ರಾಜ್ಯದಲ್ಲಿ ನೀರಿನ ಬರ ಇದೆ. ಮೊದಲು ಮಿಲ್ಕು-ಸಿಲ್ಕು ಅಂತ ಮಗ್ನರಾಗಿದ್ದ ಈ ಪ್ರದೇಶದ ಜನ ಈಗ ನೀರಿನ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಇದು ಹಿಂದೆಯೇ ಆಗಬೇಕಿತ್ತು ಎಂದರು.
ರಾಜಕೀಯ ಹೊಟ್ಟೆಪಾಡು: ಬಯಲುಸೀಮೆಗೆ ನೀರು ಕೊಡ್ತೀವಿ ಅಂತ ಹೇಳ್ತೀರೋ ಜನ ಮೊದಲು ಆ ವಿಚಾರದಲ್ಲಿ ಪ್ರಜ್ಞಾವಂತಿಕೆ ತೋರಿಸಬೇಕು. ಕೇವಲ ರಾಜಕೀಯದ ಹೊಟ್ಟೆಪಾಡಿಗಾಗಿ ನೀರು ಕೊಡುವ ಭರವಸೆ ಕೊಡೋದು ಸರಿಯಲ್ಲ. ಇದೆಲ್ಲ ದೊಡ್ಡ ಸುಳ್ಳು. ಕಾವೇರಿ ಜಲಾನಯನ ಪ್ರದೇಶದಲ್ಲಿ ಕುಡಿಯುವ ನೀರಿಗೂ ಬರವಿದೆ. ಇಂಥಾ ದುಸ್ಥಿತಿ ಇರುವಾಗ ಪ್ರಜ್ಞಾಶೂನ್ಯತೆ ಸರಿಯಲ್ಲ. ಹೀಗೇ ಮುಂದುವರಿದರೆ ರೈತರು ಬದುಕೋದು ಹೇಗೆ ಎಂದು ಪ್ರಶ್ನಿಸಿದರು.
ಈಗ ರಾಜಕಾರಣ ಸುಲಭವಾಗಿ ದುಡ್ಡು ಮಾಡುವ ಮಾರ್ಗವಾಗಿದೆ. ಪಂಚಾಯ್ತಿ ಚುನಾವಣೆಗೆ 10 ಲಕ್ಷ ಖರ್ಚು ಮಾಡಿ ಗೆದ್ದು ಬರುವ ವ್ಯವಹಾರಸ್ಥನಿಂದ ಏನನ್ನು ತಾನೆ ನಿರೀಕ್ಷಿಸಲು ಸಾಧ್ಯ? ಮೌಲ್ಯ-ಸಂಸ್ಕಾರ ಹಾಳಾಗಿದೆ. ನಾಗರಿಕತೆ ಮತ್ತು ನಮ್ಮ ಪರಂಪರೆಯ ನೈಜ ಚಿಂತನೆಗಳು ರಾಜಕೀಯದಲ್ಲಿ ಮರೆಯಾಗಿರುವುದು ವಿಷಾದನೀಯ. ಇದು ನಮ್ಮ ವ್ಯವಸ್ಥೆಯ ದುರಂತ ಎಂದರು.
ರೈತರ ಬದುರು ಹಸನಾಗಲಿ: ರೈತರ ಬದುಕು ಹಸನಾಗಬೇಕು. ಈ ಹಂತದಲ್ಲಿ ಮಿತ ಸಂಪನ್ಮೂಲಗಳ ಬಳಕೆಯಲ್ಲೇ ಪ್ರಗತಿಪರ ಕೃಷಿ ಮಾಡುವ ತಾಂತ್ರಿಕತೆಯನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವ ಮೂಲಕ ಹೇಗೆ ವ್ಯವಸಾಯಗಾರನೂ ಉತ್ತಮ ಬದುಕು ಸಾಗಿಸಲು ಸಾಧ್ಯ ಎಂಬುದನ್ನು ತಪಸೀಹಳ್ಳಿಯ ಸಾವಯವ ಕೃಷಿಕ ಸದಾನಂದ ಮಾಡಿ ತೋರಿಸಿದ್ದಾರೆ. ಕೃಷಿ ವಿಜ್ಞಾನ ಕೇಂದ್ರದ ಹೊಸ ಬಗೆಯ ಆಲೋಚನೆಗಳು ಇದಕ್ಕೆ ಪುಷ್ಠಿ ನೀಡಿವೆ. ಇದು ರಾಷ್ಟ್ರಕ್ಕೇ ಮಾದರಿಯಾಗಬೇಕು ಎಂದರು.
ಇದೇ ಸಂದರ್ಭ ಅವರು ತಪಸೀಹಳ್ಳಿಯ ಸದಾನಂದ ಅವರ 2.5 ಎಕರೆ ತೋಟದಲ್ಲಿ ಮಾದರಿ ಕೃಷಿ ಮೂಲಕ ಬೆಳೆಯಲಾಗಿರುವ ಅಜೋಲ, ಗುಲಾಬಿ, ಹುರುಳಿ, ಹಲಸು, ಕೋಳಿ ಸಾಕಣೆ, ಮೀನು ಸಾಕಣೆ, ಸ್ವಯಂ ನಿರ್ಮಿತ ಕೃಷಿ ಉಪಕರಣಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಹಾಡೋನಹಳ್ಳಿಯ ಗ್ರಾಮೀಣ ಜೈವಿಕ ಇಂಧನ ತಯಾರಿಕಾ ಘಟಕ ಮತ್ತು ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಹೊಂಗೆ ಎಣ್ಣೆ ತಯಾರಿಕೆ, ಹೊಂಗೆ ಬೀಜದಿಂದ ಜೈವಿಕ ಡೀಸೆಲ್ ತಯಾರಿಕೆ ವೀಕ್ಷಿಸಿದರು.
ಕೆವಿಕೆಯ ಹಲವು ಯೋಜನೆಗಳ ಪ್ರಾತಕ್ಷಿಕೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳೀಯ ರೈತರು, ಜಿಕೆವಿಕೆ ಉಪಕುಲಪತಿ ಡಾ.ನಾರಾಯಣಗೌಡ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement