ಕೃಷಿ ಭೂಮಿ ಸ್ವಾಧೀನದಿಂದ ಆಹಾರ ಕೊರತೆ: ಪ್ರೊ.ಮಲ್ಲಯ್ಯ ಆತಂಕ
ರಾಮನಗರ: ಅಭಿವೃದ್ಧಿ ಹೆಸರಿನಲ್ಲಿ ಕೃಷಿ ಭೂಮಿಯ ಮಿತಿಮೀರಿದ ಸ್ವಾಧೀನದ ಮೂಲಕ ರೈತಾಪಿ ಸಮುದಾಯವನ್ನು ಒಕ್ಕಲೆಬ್ಬಿಸುತ್ತಿರುವ ಪರಿಣಾಮ ದೇಶದಲ್ಲಿ ಮುಂದೆ ಆಹಾರ ಕೊರತೆ ಎದುರಾಗಲಿದೆ ಎಂದು ರಾಮನಗರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ಪ್ರೊ. ಕೆ.ಮಲ್ಲಯ್ಯ ಎಚ್ಚರಿಸಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ನಡೆದ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ 77ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಸ್ಥಿತಿ ಹೀಗೇ ಮುಂದುವರಿದಲ್ಲಿ ಜನತೆ ಮಣ್ಣು ತಿನ್ನಬೇಕಾದೀತು ಎಂದು ಹೇಳಿದರು. ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರು ರೈತ ಸಮುದಾಯವನ್ನು ಜಾಗೃತರನ್ನಾಗಿಸಿದರು. ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಮಾರ್ಗವನ್ನು ರೈತರಿಗೆ ತೋರಿಸಿಕೊಟ್ಟಿದ್ದಾರೆ. ಅವರ ವಿಚಾರಗಳು ಸಾರ್ವಕಾಲಿಕ ಸತ್ಯವಾಗಿದೆ. ನಂಜುಂಡಸ್ವಾಮಿ ಆದರ್ಶವನ್ನು ಪಾಲಿಸುವಂತೆ ರೈತ ಸಂಘದ ಮುಖಂಡ ಸಿ.ಪುಟ್ಟಸ್ವಾಮಿ ಹೇಳಿದರು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕಳೆದ ಸಾಲಿನ ಬೆಳೆ ನಷ್ಟ ಪರಿಹಾರವನ್ನು ತ್ವರಿತವಾಗಿ ವಿತರಿಸಬೇಕು ಎಂದು ರೈತ ಸಂಘ (ಒಂದು ಬಣ)ದ ಜಿಲ್ಲಾಧ್ಯಕ್ಷ ಲಕ್ಷ್ಮಣಸ್ವಾಮಿ ಆಗ್ರಹಿಸಿದರು. ಕರಣಕುಮಾರ್, ಹೊಂಬಾಳೇಗೌಡ, ಸಂಪತ್ಕುಮಾರ್, ಅನಸೂಯಮ್ಮ, ಎಂ.ಜಗದೀಶ್, ಮಧು ಭಾಗವಹಿಸಿದ್ದರು.