'ಅಕ್ಷರ ದಾಸೋಹ ಸಿಬ್ಬಂದಿ, ಹಸಿದ ಹೊಟ್ಟೆಗೆ ಅನ್ನ ನೀಡುವವರು'
ಮಾಗಡಿ: ಅಕ್ಷರ ದಾಸೋಹ ಅಡುಗೆ ಸಿಬ್ಬಂದಿ, ಹಸಿದ ಹೊಟ್ಟೆಗೆ ಅನ್ನ ನೀಡುವವರು ಎಂದು ಬಿಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಎಚ್.ಎನ್. ಅಶೋಕ್ ಪ್ರಶಂಸೆ ವ್ಯಕ್ತಪಡಿಸಿದರು.
ಅವರು ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ತಯಾರಿಸಿ ನೀಡುವ ಮೂಲಕ ಮಾತೃ ವಾತ್ಸಲ್ಯ ತೋರಬೇಕು ಎಂದರು.
ತಾಲೂಕು ಪಂಚಾಯ್ತಿ ಅಧ್ಯಕ್ಷ ಬಿ.ಟಿ. ವೆಂಕಟೇಶ್ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಬಹುತೇಕ ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವಚ್ಛತೆಯ ಕೊರತೆ ಕಂಡಿದ್ದೇನೆ. ಅಡುಗೆ ಸಿಬ್ಬಂದಿಗಳು ಮೊದಲು ಶುಚಿತ್ವ ಕಾಪಾಡಬೇಕು ಎಂದರು. ಮಕ್ಕಳಲ್ಲಿರುವ ಅಪೌಷ್ಟಿಕತೆ ದೂರ ಮಾಡಲು ಶಾಲೆಗಳಲ್ಲಿ ಪೌಷ್ಟಿಕತೆಯುಳ್ಳ ಬಿಸಿಯೂಟ ಯೋಜನೆ ಜಾರಿಗೊಂಡು ಹತ್ತು ವರ್ಷಗಳು ಕಳೆದಿದೆ. ಬಹುತೇಕ ಅಡುಗೆ ಸಿಬ್ಬಂದಿಗಳು ಅತ್ಯಂತ ಕಾಳಜಿಯಿಂದ ಸ್ವಚ್ಛತೆ ಕಾಪಾಡಿಕೊಂಡು ಬರುತ್ತಿದ್ದಾರೆ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ಅಕ್ಕೋಜಿ ತಿಳಿಸಿದರು. ಬಿಇಓ ಆರ್. ರಂಗಸ್ವಾಮಿ ಮಾತನಾಡಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಜಿ.ಕೃಷ್ಣ, ಸಂಪನ್ಮೂಲಾಧಿಕಾರಿ ಕೆ.ವಿ.ಕೆ ಡಾ.ಲತಾ, ಸಿ.ಆರ್.ಪಿ. ವಾಸು, ಸನ್ನಿ ಜೋಸೆಫ್, ಆರೋಗ್ಯ ಇಲಾಖೆಯ ಹಿರಿಯ ಸಹಾಯಕಿ ಜಮುನಾ, ನಾಗರಾಜು ಇತರರು ಇದ್ದರು.