ಅರ್ಕಾವತಿ ಕ್ಷೇತ್ರದಲ್ಲಿ ವಿಜೃಂಭಣೆಯ ಬ್ರಹ್ಮರಥೋತ್ಸವ
ದೊಡ್ಡಬಳ್ಳಾಪುರ: ಇಲ್ಲಿನ ಸುಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಶ್ರೀಅರ್ಕಾವತಿ ಸೀತಾರಾಮ ಸನ್ನಿಧಿಯಲ್ಲಿ ಬ್ರಹ್ಮರಥೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಭಕ್ತಾದಿಗಳು ಭಾಗವಹಿಸಿ ಶ್ರೀಸ್ವಾಮಿಯ ರಥಕ್ಕೆ ಹಣ್ಣು-ಧವನ ಅರ್ಪಿಸುವ ಮೂಲಕ ಭಕ್ತಿಭಾವ ಮೆರೆದರು.
ರಥೋತ್ಸವ ಅಂಗವಾಗಿ ದೇವಾಲಯದಲ್ಲಿ ಕಲ್ಯಾಣ ಮಹೋತ್ಸವ, ವಿಶೇಷ ಪೂಜಾ ಕಾರ್ಯಕ್ರಮಗಳು, ಭಕ್ತಾದಿಗಳಿಂದ ಅರವಂಟಿಕೆ ಏರ್ಪಡಿಸಲಾಗಿತ್ತು. ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ಶ್ರೀ ಸೀತಾರಾಮಾಂಜನೇಯ ಸ್ವಾಮಿಯ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ತಾಲೂಕಿನ ಹಮಾಮ್ ಗ್ರಾಮದ ಯುವಕರು ಮತ್ತು ಗ್ರಾಮಸ್ಥರಿಂದ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಪುರಾತನ ಇತಿಹಾಸ ಮತ್ತು ಐತಿಹ್ಯ ಹೊಂದಿರುವ ಶ್ರೀಕ್ಷೇತ್ರದಲ್ಲಿ ಈ ಬಾರಿ 57ನೇ ವರ್ಷದ ಬ್ರಹ್ಮರಥೋತ್ಸವ ನಡೆಯಿತು. ಸದ್ಯ ದೇವಾಲಯ ಮುಜರಾಯಿ ಇಲಾಖೆ ಸುಪರ್ದಿನಲ್ಲಿದ್ದು, ತಾಲೂಕಿನ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ.