ನೀರಾವರಿ ಯೋಜನೆ ಅನುಷ್ಠಾನಕ್ಕೆ ಯೋಗೇಶ್ವರ್ ಯತ್ನ
ಚನ್ನಪಟ್ಟಣ: ಬರಪೀಡಿತ ಚನ್ನಪಟ್ಟಣ ತಾಲೂಕಿನ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಭಗೀರಥ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೈಕೋರ್ಟ್ನ ನ್ಯಾ. ಹುಲುವಾಡಿ ಜಿ.ರಮೇಶ್ ಮುಕ್ತಕಂಠದಿಂದ ಪ್ರಶಂಸಿಸಿದರು.
ತಾಲೂಕಿನ ಮೊಗೇನಗಳ್ಳಿ ಗ್ರಾಮದಲ್ಲಿ ಕಣ್ವ-ಶಿಂಷಾ ಏತ ನೀರಾವರಿ ಯೋಜನೆ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಈ ತಾಲೂಕಿನ ನೀರಾವರಿ ಯೋಜನೆಗಳು ಕಾರ್ಯಗತವಾಗಲು ತಾವು ಶೇಕಡ 30ರಷ್ಟು ಪಾತ್ರ ವಹಿಸಿದ್ದರೆ, ಯೋಗೇಶ್ವರ್ ಪ್ರಯತ್ನ ಶೇಕಡ 70 ಎಂದರು.
ಚನ್ನಪಟ್ಟಣದ ನೀರಾವರಿ ಯೋಜನೆ ಜಾರಿಯಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಯೋಜನೆ ಸಾಕಾರಗೊಂಡ ಬಳಿಕ ಇಲ್ಲಿನ ಜನರ ಬದುಕು ಹಸನಾಗುತ್ತದೆ ಎಂದು ತಿಳಿಸಿದರು.
ಚಿಂತನೆ ಅಗತ ್ಯ: ಭೀಕರ ಬರದಿಂದ ಕಂಗಾಲಾಗಿರುವ ಬಯಲುಸೀಮೆಯ ಜಿಲ್ಲೆಗಳಿಗೆ ಸಮಗ್ರ ನೀರಾವರಿ ಯೋಜನೆಗಳ ಜಾರಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು.
ವಿಶೇಷವಾಗಿ ಚನ್ನಪಟ್ಟಣವು ಹಚ್ಚ ಹಸಿರಿನಿಂದ ಕಂಗೊಳಿಸುವಂತಾಗಲು ಇಲ್ಲಿಗೆ ಹೇಮೆಯನ್ನು ಹರಿಸಬೇಕು ಎಂದು ರಮೇಶ್ ಆಗ್ರಹಿಸಿದರು.
ಶಿಂಷಾದ ಜತೆಗೆ ಹೇಮಾವತಿಯೂ ಹರಿದಾಗ ಚನ್ನಪಟ್ಟಣ ತಾಲೂಕು ಸಮಗ್ರ ನೀರಾವರಿ ಪ್ರದೇಶವಾಗಲಿದೆ. ತಮ್ಮ ತವರಾದ ಚನ್ನಪಟ್ಟಣಕ್ಕೆ ನೀರಾವರಿ ಕಲ್ಪಿಸಬೇಕೆನ್ನುವ ನಿಟ್ಟಿನಲ್ಲಿ ತಾವು ಸರ್ಕಾರದ ಮಟ್ಟದಲ್ಲಿ ಸತತ ಚರ್ಚೆ ನಡೆಸಿ, 4 ವರ್ಷದ ಹಿಂದೆಯೇ ಯೋಜನೆ ಸಿದ್ಧಪಡಿಸಿದ್ದಾಗಿ ಹೇಳಿದರು.
ಅಡ್ಡಿಗೆ ಅವಕಾಶವಿಲ್ಲ: ಹಲವು ಸವಾಲುಗಳ ನಡುವೆಯೂ ಗರಕಹಳ್ಳಿ ಏತ ನೀರಾವರಿ ಯೋಜನೆ ಕಾರ್ಯಗತಗೊಳಿಸಿರುವ ತಮಗೆ ಈಗ ಸಾಕಷ್ಟು ಅನುಭವವಾಗಿದೆ. ಈ ಅನುಭವವನ್ನು ಬಳಸಿಕೊಂಡು ಕಣ್ವ-ಶಿಂಷಾ ಸಂಗಮ ಯೋಜನೆಗೆ ಯಾವುದೇ ಅಡ್ಡಿ ಇಲ್ಲದಂತೆ ಎಚ್ಚರವಹಿಸುವೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಈ ತಾಲೂಕಿನ ಮಗನಾಗಿ ನಮ್ಮ ಜನತೆಯ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ನ್ಯಾ. ಹುಲುವಾಡಿ ಜಿ.ರಮೇಶ್ ಅವರು ನೀರಾವರಿ ಯೋಜನೆಯನ್ನು ಮಂಜೂರು ಮಾಡಿಸಲು ಸಾಕಷ್ಟು ಶ್ರಮಿಸಿದ್ದಾರೆ. ಅವರನ್ನು ನಾವು ಮರೆಯುವಂತಿಲ್ಲ ಎಂದರು.
ಆಯುಧ ಪೂಜೆಗೆ ನೀರು: ಇದೀಗ ಪೂಜೆಯೊಂದಿಗೆ ಕಾರ್ಯಾರಂಭವಾಗಿರುವ ನೀರಾವರಿ ಯೋಜನೆ ಮೂಲಕ ಮುಂದಿನ ಆಯುಧಪೂಜೆ ಹಬ್ಬದ ವೇಳೆಗೆ ನೀರು ಹರಿಸಲು ಸಂಕಲ್ಪ ಮಾಡಲಾಗಿದೆ.
ಎಂಥದ್ದೇ ಸಮಸ್ಯೆ ಎದುರಾದರೂ ನೀರು ತರುವಲ್ಲಿ ಯಶಸ್ವಿಯಾಗುವೆ ಎಂದು ಅಚಲ ವಿಶ್ವಾಸ ವ್ಯಕ್ತಪಡಿಸಿದರು.
ತಾಂತ್ರಿಕ ಕಾರಣಗಳಿಂದ ಈ ಯೋಜನೆಯನ್ನು ಕೇವಲ ಕುಡಿಯುವ ನೀರಿನ ಯೋಜನೆ ಎಂದು ಹೇಳಲಾಗುತ್ತಿದೆ. ಕೇವಲ 17 ಕೆರೆಗಳಿಗೆ ಮಾತ್ರ ಎಂದು ಯೋಜನೆಯಲ್ಲಿ ತಿಳಿಸಿದ್ದರೂ ತಾಲೂಕಿನ ಎಲ್ಲಾ ಕೆರೆಗಳಿಗೂ ನೀರು ಪೂರೈಕೆ ಮಾಡಲಾಗುವುದೆಂದು ಭರವಸೆ ನೀಡಿದರು.
ಈ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಎಲ್ಲಾ ತೊಡಕು, ಅಡ್ಡಿ-ಆತಂಕಗಳನ್ನು ನಿವಾರಿಸಿದ್ದು, ಈ ಬಗ್ಗೆ ಕಾನೂನು ಸಲಹೆ ಸಹ ಪಡೆದಿದ್ದೇನೆ. ಯಾರು ಏನೇ ಮಾಡಿದರೂ ಯೋಜನೆಯನ್ನು ತಡೆ ಹಿಡಿಯಲಾಗುವುದಿಲ್ಲ ಎಂದರು.
ಕಾವೇರಿ ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ತಿಮ್ಮೇಗೌಡ, ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಾದ ಗಂಗಾಧರ್, ವೆಂಕಟೇಗೌಡ, ವಕೀಲ ಕೆ.ಟಿ.ತಿಮ್ಮೇಗೌಡ, ಬಿಜೆಪಿ ಮುಖಂಡರಾದ ಶಾರದಾ ಚಂದ್ರಶೇಖರ್, ಸಿಂಗರಾಜಪುರ ರಾಜಣ್ಣ, ಹರೂರು ರಾಜಣ್ಣ, ಹುಲುವಾಡಿ ಶಿವಕುಮಾರ್, ಅಕ್ಕೂರು ಶೇಖರ್, ರಾಂಪುರ ಮಲುವೇಗೌಡ ಭಾಗವಹಿಸಿದ್ದರು.
ಅಧಿಕಾರಿಗಳ ಸಾಕ್ಷ್ಯ
ಚನ್ನಪಟ್ಟಣದ ನೀರಾವರಿ ಯೋಜನೆಗಳ ಅನುಷ್ಠಾನದ ಬಗ್ಗೆ ಎಲ್ಲೆಡೆ ಮೂಡಿರುವ ಅನುಮಾನವನ್ನು ನಿವಾರಿಸಲು ಸಚಿವ ಸಿ.ಪಿ.ಯೋಗೇಶ್ವರ್ ಅವರು ಬಹಿರಂಗ ಸಭೆಯಲ್ಲಿ ಅಧಿಕಾರಿಗಳಿಂದ ಸಾಕ್ಷ್ಯ ಹೇಳಿಸುವ ದಾರಿ ಹುಡುಕಿಕೊಂಡರು.
ರಾಜ್ಯ ಸರ್ಕಾರದ ಆಯಸ್ಸು ಇಂದೋ ನಾಳೆಯೋ ಎನ್ನುವಂತಿದೆ. ತನ್ಮಧ್ಯೆ, ನೀರಾವರಿ ಯೋಜನೆ ಕುರಿತು ಯೋಗೇಶ್ವರ್ ರಾಜಕೀಯ ವಿರೋಧಿಗಳು ವಿಭಿನ್ನ ಹೇಳಿಕೆ ನೀಡಿದ್ದರು. ಅದೆಲ್ಲಕ್ಕೂ ಅಧಿಕಾರಿಗಳ ಮೂಲಕವೇ ಉತ್ತರ ಕೊಡಿಸಲಾಯಿತು.
ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಯೋಜನೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಹೇಳುವ ಮೂಲಕ ಭೂ ಸ್ವಾಧೀನವೇ ನಡೆದಿಲ್ಲವೆನ್ನುವ ರಾಜಕೀಯ ಮುಖಂಡರ ಆರೋಪಕ್ಕೆ ಸ್ಪಷ್ಟನೆ ನೀಡಿದರು.
ಯೋಗೇಶ್ವರ್ ಅವರನ್ನು ಆಧುನಿಕ ಭಗೀರಥ ಎಂದು ಕರೆಯುವ ಜತೆಗೆ ತಮ್ಮ ಭಾಷಣದುದ್ದಕ್ಕೂ ಸಚಿವರ ಗುಣಗಾನ ಮಾಡಿದ ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ, ಚನ್ನಪಟ್ಟಣದ ನೀರಾವರಿ ಯೋಜನೆಗೆ ಯಾರಿಂದಲೂ ಅಡ್ಡಿ ಸಾಧ್ಯವೇ ಇಲ್ಲ ಎಂದರು.
ಅಧಿಕಾರಿಗಳ ಈ ಹೇಳಿಕೆಗಳನ್ನು ಸ್ವತಃ ಸಚಿವ ಯೋಗೇಶ್ವರ್ ಆಗಾಗ್ಗೆ ಹೇಳಿಕೊಂಡೇ ಬಂದಿದ್ದಾರೆ. ಆದರೆ, ಅದೆಲ್ಲವೂ ಅಧಿಕಾರಿಗಳಿಂದ ಪುನರುಚ್ಚಾರವಾದರೆ ಜನತೆಯಲ್ಲಿ ಮತ್ತಷ್ಟು ನಂಬಿಕೆ ಬರುತ್ತದೆ ಎನ್ನುವ ಕಾರಣಕ್ಕೆ ಇಷ್ಟೆಲ್ಲ ಕಸರತ್ತು ನಡೆಯಿತು.
ಯೋಗೇಶ್ವರ್ಗೆ ಮುತ್ತಿಗೆ
ನೀರಾವರಿ ಕಾಮಗಾರಿಗೆ ಚಾಲನೆ ನೀಡಲು ಮೊಗೇನಹಳ್ಳಿಗೆ ತೆರಳುತ್ತಿದ್ದ ಸಚಿವ ಯೋಗೇಶ್ವರ್ ಅವರಿಗೆ ಗೋವಿಂದಹಳ್ಳಿ ಗ್ರಾಮದ ಮಹಿಳೆಯರು ಮುತ್ತಿಗೆ ಹಾಕಿ, ತಮ್ಮೂರಿಗೆ ಕುಡಿಯುವ ನೀರು ಪೂರೈಸಿ ಎಂದು ಪಟ್ಟು ಹಿಡಿದರು.
ನಮ್ಮ ಗ್ರಾಮದಲ್ಲಿ ಕುಡಿಯಲು ನೀರಿಲ್ಲ. ಸ್ಥಳೀಯ ಚುನಾಯಿತ ಪ್ರತಿನಿಧಿಗಳನ್ನು ಪ್ರಶ್ನಿಸಿದರೆ ನಮ್ಮ ಅನುದಾನದಲ್ಲಿ ನಾವು ಸಾಧ್ಯವಾದಷ್ಟು ಕೊಳವೆ ಬಾವಿ ಹಾಕಿಸಿದ್ದೇವೆ. ಈ ಬಗ್ಗೆ ಶಾಸಕರೂ ಆದ ಸಚಿವ ಯೋಗೇಶ್ವರ್ ಅವರನ್ನೇ ಕೇಳಿ ಎನ್ನುತ್ತಾರೆ. ನಮಗೆ ಕುಡಿಯಲು ನೀರು ಕೊಡಿ ಎಂದು ಕೂಗು ಹಾಕಿದರು. ಪ್ರತಿಭಟನಾಕಾರರ ಜತೆ ಮಾತನಾಡಿದ ಸಚಿವ ಯೋಗೇಶ್ವರ್ ನಿಮ್ಮ ಗ್ರಾಮಕ್ಕೆ 20 ಕೊಳವೆ ಬಾವಿ ಕೊರೆಸಿದರೂ ನೀರು ಸಿಕ್ಕಿಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ, ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವುದಾಗಿ ಭರವಸೆ ಇತ್ತರು. ಮಹಿಳೆಯರು ಪ್ರತಿಭಟನೆಯಿಂದ ಹಿಂದೆ ಸರಿದು, ಸಚಿವರ ಪ್ರಯಾಣಕ್ಕೆ ಅವಕಾಶ ನೀಡಿದರು.