ವಾಯುದಳದ ಮಾಜಿ ವಿಂಗ್ ಕಮಾಂಡರ್ ಕೊಲೆ: ಪತ್ತೆ ಹಚ್ಚಿದ ಪೊಲೀಸರು
ಆನೇಕಲ್: ರಾಬರಿ ನಡೆಸುತ್ತಿದ್ದ ಯುವಕರ ತಂಡ ಕುಡಿದ ಅಮಲಿನಲ್ಲಿ ವ್ಯಲ್ಯೊಬ್ಬರನ್ನು ಕೊಲೆ ಮಾಡಿ ಪ್ರಕರಣ ಮುಚ್ಚಿ ಹಾಕಲು ಶವವನ್ನು ಹೂತಿಟ್ಟ ಘಟನೆ ತಾಲೂಕಿನ ಅತ್ತಿಬೆಲೆ ಸಮೀಪದ ಬಳಗಾರಹಳ್ಳಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕೊಲೆಯಾದ ದುದೈವಿ ಮುಖೇಶ್ ಮಿಶ್ರ (59). ಉತ್ತರ ಪ್ರದೇಶ ಮೂಲದ ಇವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈತ ತಾಲೂಕಿನ ಬಳಗಾರನಹಳ್ಳಿಯ ಬಳಿ ದಾಬಾ ನಡೆಸುತ್ತಿದ್ದ ಎನ್ನಲಾಗಿದೆ.
ಇತ್ತೀಚೆಗಷ್ಟೇ ರಾಬರಿ ತಂಡ ಕಟ್ಟಿಕೊಂಡು ಒಂಟಿಯಾಗಿ ಬರುವವರ ಮೇಲೆ ದಾಳಿ ನಡೆಸಿ ಹಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ 5 ಜನ ಆರೋಪಿಗಳಾದ ಕಾರ್ತಿಕ್, ಬಾಬು ಅ. ಬಾಬಿ, ಅಭಿಷೇಕ್, ಮುರಳಿ, ಮನೋಜ್ ಎಂಬುವವರನ್ನು ಈ ಸಂಬಂಧ ಬಂಧಿಸಲಾಗಿದೆ.
ಘಟನೆಯ ವಿವರ: ಇದೇ 8 ರಂದು ರಾತ್ರಿ 11 ರ ಸಮಯದಲ್ಲಿ ಸ್ಕೂಟರ್ನಲ್ಲಿ ಬರುತ್ತಿದ್ದ ಮಿಶ್ರಾರನ್ನು ಅಡ್ಡಗಟ್ಟಿ ಅವರ ಮೇಲೆ ಹಲ್ಲೆ ನಡೆಸಿ ಅವರ ಬಳಿ ಇದ್ದ ಚಿನ್ನದ ಸರ, ಗಡಿಯಾರ ಮತ್ತು ಮೊಬೈಲ್ ಕಿತ್ತುಕೊಂಡಿದ್ದಾರೆ. ಮಿಲ್ಟ್ರಿಯಲ್ಲಿ ಕೆಲಸ ಮಾಡಿದ ಮಿಶ್ರಾ 5 ಜನರ ಹಲ್ಲೆಯನ್ನು ತಡೆದು ಆತ್ಮ ರಕ್ಷಣೆಗಾಗಿ ಪ್ರತಿ ದಾಳಿ ನಡೆಸಿದ್ದಾರೆ. ಕೆಳಗೆ ಬಿದ್ದ ಮಿಶ್ರಾರ ತಲೆಯ ಮೇಲೆ ಕಲ್ಲನ್ನು ಎತ್ತಿ ಹಾಕಿದಾಗ ಸಾವನ್ನಪ್ಪಿದರೆಂದು ಅರೋಪಿಗಳು ತಿಳಿಸಿದ್ದಾರೆ.
ಸತ್ತ ಅವರನ್ನು ಅವರದೇ ವಾಹನದಲ್ಲಿ ಕುಳ್ಳಿರಿಸಿಕೊಂಡು ಅವರ ಗಾಡಿಯಲ್ಲಿದ್ದ ಪೆಟ್ರೋಲ್ ತೆಗೆದು ಅವರ ಮೇಲೆ ಸುರಿದು ಸುಟ್ಟ ಹಾಕಿದ್ದಾಗಿ ತಿಳಿಸಿದ್ದಾರೆ. ಯಾರಿಗೂ ಅನುಮಾನ ಬರದಂತೆ ಪಕ್ಕದಲ್ಲಿಯೆ ಗುಂಡಿ ತೆಗೆದು ಹೂತಿಟ್ಟು ಪರಾರಿಯಾಗಿದ್ದಾರೆ.
ಫೆ.9 ರಂದು ಬೆಳಗ್ಗೆ ಬಳಗಾರನಹಳ್ಳಿಯ ಮಳಿಗೆಯ ಬಳಿ ರಕ್ತದ ಕಲೆಗಳಿದ್ದು ಸ್ಥಳದಲ್ಲಿ ಕನ್ನಡಕ, ಬೆಳ್ಳಿ ಉಂಗುರ ಕಂಡ ಅಂಗಡಿ ಮಾಲೀಕ ವೇದಮೂರ್ತಿ ಅತ್ತಿಬೆಲೆ ಪೊಲೀಸ್ ಠಾಣೆಗೆ ವಿಷಯ ತಿಳಿಸಿದರು. ಪೊಲೀಸರು ಈ ಹಂತದಲ್ಲಿ ತನಿಖೆಯನ್ನು ಚರುಕುಗೊಳಿಸಿದರು. ಫೆ. 13 ರಂದು ಶವದ ವಾಸನೆ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಕೊಳೆತ ಶವ ಕಂಡುಬಂತು. ಶವವನ್ನು ಮೇಲೆ ತೆಗೆದು ಮುಂದಿನ ಕ್ರಮಕ್ಕೆ ಕಳುಹಿಸಲಾಯಿತು. ಅತ್ತಿಬೆಲೆಯಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಕಾರ್ತೀಕ್ನನ್ನು ಬಂಧಿಸಿ ವಿಚಾರಣೆ ನಡೆಸಿದಾಗಿ ಆತ ಎಲ್ಲ ವಿಷಯವನ್ನು ಬಾಯಿ ಬಿಟ್ಟಿದ್ದಾನೆ. ನಂತರ ಇತರ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪಿಎಸ್ಸೈ ತಿಳಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಪ್ರಕಾಶ್ ಹಾಗೂ ಡಿವೈಎಸ್ಪಿ ಕುಮಾರಸ್ವಾಮಿ ಭೇಟಿ ನೀಡಿದ್ದರು. ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಳಪಡಿಸಿ ತನಿಖೆಗಾಗಿ ವಶಕ್ಕೆ ಪಡೆದಿರುವುದಾಗಿ ಸಿಪಿಐ ವೆಂಟಕಟಶೆಟ್ಟಿ ತಿಳಿಸಿದರು.