ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಣೆ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕು ಮೊಬೈಲ್ ಮತ್ತು ಕರೆನ್ಸಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಇಲ್ಲಿನ ಸರ್ಕಾರಿ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗ ಮತ್ತು ಸರ್ಕಾರಿ ಉರ್ದು ಶಾಲೆಯ ಅರ್ಹ ಬಡ ಕುಟುಂಬಗಳ ಮಕ್ಕಳಿಗೆ ಲೇಖನ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಸಂಘದ ಗೌ.ಅಧ್ಯಕ್ಷ ಕೃಷ್ಣಪ್ಪ ಕಾರ್ಯಕ್ರಮದ ಗಣ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಂಘದ ಸಮಾಜ ಸೇವಾ ಚಟುವಟಿಕೆಗಳ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಘದ ಕಾರ್ಯಕಾರಿ ಮಂಡಲಿ ಮತ್ತು ಸದಸ್ಯರು ವಿದ್ಯಾಕ್ಷೇತ್ರಕ್ಕೆ ನೆರವಾಗುವ ಈ ಮಹತ್ವದ ಕಾರ್ಯಕ್ಕೆ ಸ್ಪಂದಿಸಿದ್ದು ಗಣನೀಯ. ಇದನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಬೇಕು. ಸಂಘದ ಇನ್ನಿತರ ಸೇವಾ ಕಾರ್ಯಗಳಿಗೆ ಇದು ಸ್ಫೂರ್ತಿ ಒದಗಿಸುತ್ತದೆ. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿ ಅಧ್ಯಯನಶೀಲರಾಗಬೇಕು ಎಂದರು. ಸರ್ಕಾರಿ ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲ ಸುಧೀಂದ್ರನಾಥ್, ಮೊಬೈಲ್ ಮತ್ತು ಕರೆನ್ಸಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ವಿಶ್ವನಾಥ್, ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ಶಬೀರ್‌ಖಾನ್, ಖಜಾಂಚಿ ರಮೇಶ್, ಪದಾಧಿಕಾರಿಗಳಾದ ವೆಂಕಟೇಶ್, ಹರ್ಷ, ಶಿಕ್ಷಕರಾದ ಮಹಾಲಿಂಗಯ್ಯ, ನರಸಿಂಹಮೂರ್ತಿ ಮತ್ತಿತರರು ಹಾಜರಿದ್ದರು.
ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸದಸ್ಯರ ಆಯ್ಕೆ
ಹೊಸಕೋಟೆ: ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸದಸ್ಯರಾಗಿ ಹೊಸಕೋಟೆಯಿಂದ ಎನ್.ನಾಗರಾಜ್, ನಂಜುಂಡಪ್ಪ ಆಯ್ಕೆಯಾಗಿದ್ದಾರೆ. ಈ ಸಂದರ್ಭ ಆಯ್ಕೆಗೊಂಡ ಸದಸ್ಯರುಗಳು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡರಿಗೆ ಅಭಿನಂದನೆ ತಿಳಿಸಿದರು.