ಆನೇಕಲ್ಲಿನಲ್ಲಿ ವೇಣುಗೋಪಾಲಸ್ವಾಮಿ ರಥೋತ್ಸವ
ಆನೇಕಲ್: ಆನೇಕಲ್ ಪಟ್ಟಣದ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ಶ್ರೀದೇವಿ ಭೂದೇವಿ ಸಹಿತ ಶ್ರೀ ವೇಣುಗೋಪಾಲಸ್ವಾಮಿ ಬ್ರಹ್ಮ ರಥೋತ್ಸವವು ಶುಕ್ರವಾರ ಅದ್ಧೂರಿಯಾಗಿ ನಡೆಯಿತು ಉತ್ಸವ ಮೂರ್ತಿಯನ್ನು ಕಲ್ಲಿನ ರಥಕ್ಕೆ ಭಕ್ತಿ ಭಾವಗಳಿಂದ ಕರೆತಂದಾಗ ನೆರೆದಿದ್ದ ಜನಸ್ಥೋಮದಿಂದ ಗೋವಿಂದಾ.. ಗೋಪಾಲ.. ಉದ್ಗಾರ ಮುಗಿಲು ಮುಟ್ಟಿತು. ದೇಗುಲ ಸಮಿತಿಯವರು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಿದರು. ಕಲ್ಯಾಣ ಮಂಟಪ ನಿವಾಸಿಗಳು ಭಕ್ತಾದಿಗಳಿಗೆ ಪಾನಕ, ಕೋಸಂಬರಿ ಹಾಗೂ ಮಜ್ಜಿಗೆ ಹಂಚಿದರು. ಬ್ರಾಹ್ಮಣ ಮಂಡಳಿಯವರು ಪಾಳೇಗಾರ್ ಅಯ್ಯಂಗಾರ್ ನಿವಾಸದಲ್ಲಿ ಅರವಂಟಿಕೆ ಸೇವೆ ನಡೆಸಿದರು. ಅರ್ಚಕ ಮಂಡಳಿಯವರು ದೇಗುಲ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನೆ ಬಗ್ಗೆ ಭಕ್ತಾದಿಗಳಲ್ಲಿ ಮನವಿ ಸಲ್ಲಿಸಿದರು. ಪುರಸಭಾ ಸದಸ್ಯರಾದ ಜಿ. ಗೋಪಾಲ್, ಮುರಳಿ, ಬಿ.ನಾಗರಾಜು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥೋತ್ಸವವು ಚರ್ಚ್ ರಸ್ತೆ, ತ್ಯಾಗ ರಾಜ ರಸ್ತೆ, ತಿಲಕ್ ಚೌಕ, ಥಳಿ ರಸ್ತೆ ರಾಜ ಮಾರ್ಗದಲ್ಲಿ ಸಂಚರಿಸಿ ಕಲ್ಯಾಣ ಮಂಟಪ ಮೂಲಕ ಸ್ವಸ್ಥಾನ ಸೇರಿತು.