ನ್ಯಾಯಯುತ ಬೇಡಿಕೆ ಈಡೇರಿಸದಿದ್ದರೆ ಪರಿಣಾಮ ಭಿನ್ನ
ದೊಡ್ಡಬಳ್ಳಾಪುರ: ಇಲ್ಲಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ತುಳಸೀಯಾನ್ ಕೈಗಾರಿಕಾ ಘಟಕದಲ್ಲಿ ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವೆ ಉಂಟಾಗಿರುವ ವಿರಸ ಗಂಭೀರ ಪ್ರತಿಭಟನೆಯ ಹಾದಿ ತುಳಿದಿದೆ. ಕಾರ್ಮಿಕರ ಅಸಹಕಾರದ ನೆಪವೊಡ್ಡಿ ಲಾಕ್‌ಔಟ್ ಮಾಡಿದ್ದ ಆಡಳಿತ ಮಂಡಳಿ ಮತ್ತೆ ಕಾರ್ಖಾನೆಯನ್ನು ಪುನಾರಂಭಿಸಿ, ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ಮಾಡುತ್ತಿರುವ ಕಾರ್ಮಿಕರನ್ನು ಕಾರ್ಯಯೋಜನೆಗೆ ನಿಯೋಜಿಸದೆ ತನ್ನ ಉದ್ಧಟತನ ಮೆರೆದಿದೆ. ಈ ಹಿನ್ನೆಲೆಯಲ್ಲಿ ನೂರಾರು ಕಾರ್ಮಿಕ ಕುಟುಂಬಗಳು ಹೋರಾಟಕ್ಕಿಳಿದಿವೆ ಎಂದು ಪ್ರತಿಭಟನಾನಿರತರು ತಿಳಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಶುಕ್ರವಾರ ಮಧ್ಯಾಹ್ನ ಆಗಮಿಸಿದ್ದ ಸ್ಥಳೀಯ ಶಾಸಕ ಜೆ.ನರಸಿಂಹಸ್ವಾಮಿ, ಕಾರ್ಮಿಕರ ನ್ಯಾಯಯುತ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಕಳೆದ ಜ.27ರಂದು ಕಾರ್ಖಾನೆ ಲಾಕೌಟ್ ಆದ ನಂತರದಲ್ಲಿ ನಡೆದ ಮಾತುಕತೆ ಮತ್ತು ಒಪ್ಪಂದದ ಪ್ರಕಾರ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಎಲ್ಲ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು. ಕಾರ್ಖಾನೆಗಾಗಿ 15-20 ವರ್ಷ ದುಡಿದ 20 ಮಂದಿ ಕಾರ್ಮಿಕರನ್ನು ಅಮಾನತು ಮಾಡಿ, ಹೋರಾಟನಿರತ ಕಾರ್ಮಿಕರಿಗೂ ಮಾಹಿತಿ ಇಲ್ಲದಂತೆ ಕಾರ್ಖಾನೆ ಪುನಾರಂಭ ಮಾಡಿರುವುದು ಸರಿಯಲ್ಲ. ಕೂಡಲೇ ಅಮಾನತು ರದ್ದಾಗಬೇಕು. ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಡಳಿತ ಮಂಡಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಆಡಳಿತ ಮಂಡಲಿಯ ಅಧಿಕಾರಿ ಹರೀಶ್, ಕಾರ್ಮಿಕರ ಬೇಡಿಕೆಗಳಿಗೆ ಕವಡೆ ಕಿಮ್ಮತ್ತೂ ನೀಡದೆ ಸಂಘಟನೆಯ ವಿರೋಧ ಲೆಕ್ಕಿಸದೆ ಕೆಲಸ ಮುಂದುವರೆಸಿದ್ದಾರೆ. ಕಾರ್ಖಾನೆಯ ಈ ಉದ್ಧಟತನದಿಂದಾಗಿ 1 ಸಾವಿರಕ್ಕೂ ಹೆಚ್ಚು ಮಂದಿ ಬೀದಿಗೆ ಬೀಳುವಂತಾಗಿದೆ. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ಹೋರಾಟದಲ್ಲಿ ಭಾಗವಹಿಸಿರುವ ಕಾರ್ಮಿಕ ಸಂಘದ ಪದಾಧಿಕಾರಿಗಳಾದ ವಿಶ್ವನಾಥ್, ಹನುಮಂತೇಗೌಡ ಮತ್ತಿತರರು ಹೇಳಿದ್ದಾರೆ.
ಬೆಂಬಲ: ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ತಾಲೂಕಿನ ಅನೇಕ ಕನ್ನಡಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಕರ್ನಾಟಕ ರಕ್ಷಣಾವೇದಿಕೆ ನಾರಾಯಣಗೌಡರ ಬಣದ ವಿವಿಧ ಘಟಕಗಳು ಬೆಂಬಲ ವ್ಯಕ್ತಪಡಿಸಿವೆ. ಶಾಸಕರೂ ಕಾರ್ಮಿಕರ ದನಿಗೆ ಸ್ಪಂದಿಸುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಹೋರಾಟ ಗಂಭೀರ ಸ್ವರೂಪಕ್ಕೆ ತಿರುಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಕೂಡಲೇ ಆಡಳಿತ ವರ್ಗ ಎಚ್ಚೆತ್ತು ಕಾರ್ಮಿಕರೊಂದಿಗೆ ಸಮನ್ವಯ ಸಾಧಿಸುವಲ್ಲಿ ಯಶಸ್ವಿಯಾಗಬೇಕಿದೆ. ಪ್ರತಿಭಟನೆ ಮತ್ತು ಶಾಸಕರ ಭೇಟಿ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆ, ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಹಾಜರಿದ್ದರು.