ಮೇಳಗಳು ಜನ ಜಾಗೃತಿಗೆ ಸಹಕಾರಿ: ನಾಗರಾಜ್
ಆನೇಕಲ್: ಆಧುನಿಕತೆ ಎಂಬುದು ಎಲ್ಲ ಕ್ಷೇತ್ರಗಳಲ್ಲೂ ಆವರಿಸುತ್ತಿದ್ದು ಕೃಷಿಯಿಂದ ಮನೆಯವರೆವಿಗೂ ಸುಧಾರಿತ ಉಪಕರಣ ಹಾಗೂ ಸಲಕರಣೆಗಳ ಬಳಕೆ ಸಾಮಾನ್ಯವಾಗಿದೆ. ಸಮಯದ ಉಳಿತಾಯ, ಮಿತವ್ಯಯ ಹಾಗೂ ಶೀಘ್ರ ಬಳಕೆಯ ಸಾಧನಗಳ ಪ್ರದರ್ಶನ ಹಾಗೂ ಮಾರಾಟ ಮೇಳವು ಜನ ಸಾಮಾನ್ಯರಿಗೆ ಉಪಯುಕ್ತವಾಗಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ನಾಗರಾಜ್ ತಿಳಿಸಿದರು.
ಅವರು ಆನೇಕಲ್ಲಿನ ಶ್ರೀ ರಾಮ ಕುಟೀರದಲ್ಲಿ ನಡೆಯುತ್ತಿರುವ ಕೃಷಿ ಹಾಗೂ ಗ್ರಾಹಕರ ಮೇಳವನ್ನು ಉದ್ಘಾಟಿಸಿ ಮಾತನಾಡಿ ಕೃಷಿ ಇಲಾಖೆಯಲ್ಲಿ ರೈತರಿಗೆ ಉಪಯುಕ್ತವಾಗುವ ರಸಗೊಬ್ಬರ, ಬಿತ್ತನೆ ಬೀಜ ದೊರೆಯುತ್ತದೆ. ಮೇಳದಲ್ಲಿ ಸಾವಯವ ಗೊಬ್ಬರ ಬಳಸಿ ಬೆಳೆಸಿದ ತರಕಾರಿಗಳು, ಹಣ್ಣುಗಳು ಹಾಗೂ ಧಾನ್ಯಗಳು ಲಭ್ಯವಿದ್ದು ಜನತೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಿದ್ದಾರೆ ಎಂದರು.
ಶಾಂತಿನಿಕೇತನ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಗಾಯತ್ರಿ ರಂಗರಾಜು ಮಾತನಾಡಿ ಮೇಳದಲ್ಲಿ ನವಜ್ಯೋತಿ ಪ್ರಕಾಶನದ ಪುಸ್ತಕ ಮಳಿಗೆ ಬಹುದೊಡ್ಡ ಆಕರ್ಷಣೆಯಾಗಿದೆ. ಮಕ್ಕಳಿಂದ ಹಿರಿಯ ನಾಗರಿಕರ ವರೆಗೆ ಆಸಕ್ತಿಗೆ ತಕ್ಕಂತೆ ಖ್ಯಾತ ನಾಮರ ಪುಸ್ತಕಗಳು ಲಭ್ಯವಿದೆ. ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳು ಹಾಗೂ ಸಾಮಾನ್ಯ ಜ್ಞಾನದ ಪುಸ್ತಕಗಳು ಲಭ್ಯವಿದ್ದು ಎಲ್ಲ ಮಹಿಳೆಯರು ಪುಸ್ತಕ ಕೊಂಡು ಓದಿ, ಮಕ್ಕಳಿಗೆ ತಿಳಿ ಹೇಳಬೇಕೆಂದರು. ಜಾಗೃತಿ ಕಹಳೆ ಸಂಪಾದಕ ಹಾಗೂ ಪ್ರಕಾಶಕ ಹೊಸಕೋಟೆ ರಾಜಣ್ಣ ಮಾತನಾಡಿ ರಾಜ್ಯದ ಮೂಲೆ ಮೂಲೆಯಲ್ಲೂ ಕನ್ನಡ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೂಲಕ ಕನ್ನಡ ಜಾಗೃತಿ ಮೂಡಿಸಲಾಗುತ್ತಿದೆ. ರಾಜ್ಯದ ಪ್ರತಿ ಜಿಲ್ಲೆಯ ಯುವ ಕವಿಗಳ 101 ಕವನ ಗುಚ್ಛ ಪುಸ್ತಕ ಪರಿಚಯಿಸಲಾಗಿದೆ. ವಿಜ್ಞಾನಿಗಳು, ಮಾಹಿತಿ ತಂತ್ರಜ್ಞಾನದ ದಿಗ್ಗಜರು, ಜ್ಞಾನಪೀಠ ಪುರಸ್ಕೃತರು ಸೇರಿದಂತೆ ಖ್ಯಾತನಾಮರ ಪುಸ್ತಕಗಳು ಮೇಳದಲ್ಲಿ ಲಭ್ಯವಿದೆ ಎಂದರು.
ಪುರಸಭಾ ಅಧ್ಯಕ್ಷೆ ಉಮಾ ಗೋಪಿ, ಪತ್ರಕರ್ತರ ಸಂಘದ ಅಧ್ಯಕ್ಷ ರವಿಶಾಸ್ತ್ರಿ, ಕಲಾವಿದ ಕೃಷ್ಣಮೂರ್ತಿ ಕಾಟಿ,ನಾರಾಯಣಸ್ವಾಮಿ, ಸುರೇಶ್ ಮೇಳದ ಪುಸ್ತಕ ವಿಭಾಗ, ಕೃಷಿ ವಿಬಾಗ, ವಾಹನ ಹಾಗೂ ಗೃಹ ಬಳಕೆ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದರು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಗೃಹಿಣಿಯರು ಪುಸ್ತಕ ಸಂತೆಯಲ್ಲಿ ಭಾಗವಹಿಸಿದ್ದರು.