ಸ್ನೇಹ ಸಂಬಂಧಕ್ಕೆ ಸಾಂಸ್ಕೃತಿಕ ಸ್ಪರ್ಧೆ ಸಹಕಾರಿ
ದೊಡ್ಡಬಳ್ಳಾಪುರ: ಸಾಂಸ್ಕೃತಿಕವಾಗಿ ಸಮಾಜವನ್ನು ಕಟ್ಟುವಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ಸಹಕಾರಿ. ಅಂತರ ಕಾಲೇಜುಗಳ ನಡುವೆ ನಡೆಯುವ ಸ್ಪರ್ಧೆಗಳಿಂದ ಉತ್ತಮ ಸ್ನೇಹ ಸಂಬಂಧಗಳು ರೂಪಗೊಳ್ಳುತ್ತವೆ ಎಂದು ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಪಿ.ರಾಜಣ್ಣ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂತರ ಕಾಲೇಜು ಜನಪದ ಗೀತೆ, ದೇಶಭಕ್ತಿಗೀತೆ, ಚರ್ಚೆ, ಏಕಪಾತ್ರಾಭಿನಯ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಈ ಬಗೆಯ ಸ್ಪರ್ಧೆಗಳಿಂದ ಕಲೆ ಮತ್ತು ಕಲಾವಿದ ಬೆಳೆಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ಬಹುಮುಖ ಪ್ರತಿಭೆ ಮತ್ತು ಕೌಶಲ್ಯಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಇದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ದಾರಿದೀಪ ಎಂದರು. ಕೊಂಗಾಡಿಯಪ್ಪ ಕಾಲೇಜಿನ ಪ್ರೊ.ಚಂದ್ರಪ್ಪ ಮಾತನಾಡಿ ಸುಪ್ತ ಪ್ರತಿಭೆ ವ್ಯಕ್ತಗೊಳ್ಳಲು ಕಲಾವಿದರಿಗೆ ವೇದಿಕೆಯಾಗುವ ಇಂತಹ ಕಾರ್ಯಕ್ರಮಗಳು ತನ್ನದೇ ಆದ ಸೋಪಜ್ಞತೆಯನ್ನು ಹೊಂದಿರುತ್ತವೆ ಎಂದರು. ವಿಭಾಗ ಮುಖ್ಯಸ್ಥ ಸಿ.ರಾಮಚಂದ್ರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪ್ರವೀಣ್, ವಿದ್ಯಾಶಿಲ್ಪ ಶಾಲೆಯ ಮುಖ್ಯಶಿಕ್ಷಕ ಬಿ.ಕೆ.ಮಂಜುನಾಥ್, ಉಪನ್ಯಾಸಕ ದೇವರಾಜ್, ಸಾಂಸ್ಕೃತಿಕ ಕಾರ್ಯದರ್ಶಿ ಸುರೇಶ್ಕುಮಾರ್, ರಾಮಾಂಜಿನಪ್ಪ ಭಾಗವಹಿಸಿದ್ದರು.