ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ನಗರಸಭೆ ಎಂಬ ಅರಾಜಕ ಸಂತೆ

Parashurama
Updated On : 17 Feb 2013, 12:17 pm

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆ ಅರಾಜಕವಾಗಿದೆ. ಅಡಳಿತ ಯಂತ್ರ ಭದ್ರತೆಯನ್ನು ಕಳೆದುಕೊಂಡು ವರ್ಷಗಳೇ ಉರುಳಿವೆ. ಕಳೆದ 5 ವರ್ಷಗಳಲ್ಲಂತೂ ನಗರಸಭೆ ಮರ್ಯಾದೆ ಬೀದಿಬದಿಯ ಚರ್ಚಾ ವಿಷಯವಾದದ್ದು ದುರಂತವೇ ಸರಿ. ಒಟ್ಟಾರೆ ಅಭಿವೃದ್ಧಿಯ ವೈಜ್ಞಾನಿಕ ದೃಷ್ಟಿಕೋನವಿಲ್ಲದೆ, ಸ್ವಾರ್ಥ ಮತ್ತು ವ್ಯಕ್ತಿಪ್ರತಿಷ್ಠೆಗಳ ವರ್ತುಲದಲ್ಲಿ ಸಿಲುಕಿ ಅರಾಜಕವಾಗಿರುವ ನಗರಸಭೆ ಈ ವಿಷಮ ಪರಿಸ್ಥಿತಿಯಿಂದ ಹೊರಬರಲು ಮಾ.7ರ ಚುನಾವಣೆ ರಾಜಮಾರ್ಗವಾಗಬೇಕಿದೆ.
1995ರಲ್ಲಿ ಪುರಸಭೆಯಿಂದ ನಗರಸಭೆಯಾಗಿ ಪರಿವರ್ತನೆಗೊಂಡ ನಂತರ ರಾಜ್ಯದ ಉತ್ತಮ ನಗರಸಭೆಗಳಲ್ಲಿ ಒಂದಾಗಿ ಗುರ್ತಿಸಿಕೊಂಡಿದ್ದ ದೊಡ್ಡಬಳ್ಳಾಪುರ ನಗರಸಭೆ ಇತ್ತೀಚಿನ ದಿನಗಳಲ್ಲಿ ಅಷ್ಟೇ ಕುಖ್ಯಾತಿಯನ್ನೂ ಪಡೆದುಕೊಂಡಿದ್ದು ಇತಿಹಾಸ. 2008ರಲ್ಲಿ ನಡೆದ ಚುನಾವಣೆಯ ನಂತರ ಸೃಷ್ಟಿಯಾದ ಪಕ್ಷ-ಪಕ್ಷಾಂತರದ ರಾಜಕೀಯ ಲೆಕ್ಕಾಚಾರದಲ್ಲಿ ನಿರೀಕ್ಷಿಸಿದ್ದೆಲ್ಲಾ ತಳೆಕೆಳಗಾದದ್ದೇ ಸಾಧನೆ. ಇಷ್ಟಾದರೂ ಪರಿತಪಿಸಿದ್ದು ಮಾತ್ರ ಸಾಮಾನ್ಯ ನಾಗರಿಕ ಮಾತ್ರ. ಅಭಿವೃದ್ಧಿ ಮೂಲೆಗುಂಪಾದರೂ ಎಲ್ಲ ಅಭಿವೃದ್ಧಿಯಾಗಿದೆ ಎಂಬ ಕೋಟಿ ಲೆಕ್ಕಾಚಾರದ ಮಾತುಗಳೇ ಕೇಳಿಬಂದದ್ದೂ ಕಾಕತಾಳೀಯ.
ಜಿ.ರಾಮಕೃಷ್ಣ, ಸೋಮರುದ್ರಶರ್ಮ(ಪ್ರಭಾರಿ), ಎನ್.ಮಲ್ಲಿಕಾರ್ಜುನ್, ಕಾಂತಮ್ಮ ಕೃಷ್ಣಮೂರ್ತಿ, ಜಿ.ರಾಮಕೃಷ್ಣ(ಪ್ರಭಾರಿ), ಜಗದೀಶರೆಡ್ಡಿ ಕಳೆದ 5 ವರ್ಷಗಳಲ್ಲಿ ಅಧ್ಯಕ್ಷ ಗಾಧಿಯ ಅಧಿಕಾರ ಹಂಚಿಕೊಂಡವರು. ಅಂದರೆ ಬರೋಬ್ಬರಿ 4 ಮಂದಿ ಅಧಿಕಾರಸ್ಥ ಅಧ್ಯಕ್ಷರು ಮತ್ತು ಇಬ್ಬರು ಪ್ರಭಾರಿ ಅಧ್ಯಕ್ಷರನ್ನು ಕಂಡ ನಗರಸಭೆ ಅಧ್ಯಕ್ಷ ಗಾಧಿಯ ಹಗ್ಗ-ಜಗ್ಗಾಟಕ್ಕೇ ಹೆಸರಾಯಿತೇ ವಿನಃ ಪ್ರಗತಿಪರ ಕಾರ್ಯಚಟುವಟಿಕೆಯಿಂದಲ್ಲ. ಇನ್ನು ಸ್ಥಾಯೀ ಸಮಿತಿಗೆ 1 ವರ್ಷ ಮಾತ್ರ ಅಧ್ಯಕ್ಷರಿದ್ದರು. ಉಳಿದ 4 ವರ್ಷ ನಗರಸಭೆಯಲ್ಲಿ ಸ್ಥಾಯೀ ಸಮಿತಿಯೇ ಇರಲಿಲ್ಲ. ರಾಜಕಾರಣದ ದಾಳಗಳಾಗಿ ಬಳಕೆಯಾದ ಹಲವು ನಗರಸಭಾ ಸದಸ್ಯರಿಗೆ ತಮ್ಮ ನೆಲೆ(ಪಕ್ಷ)ಯ ಕುರಿತೇ ದೊಡ್ಡ ಗೊಂದಲ ಮೂಡಿತ್ತು.
ಶುರುವಾಗಿದೆ ಲೆಕ್ಕಾಚಾರ: ಚುನಾವಣೆ ಘೋಷಣೆಯಾಗುತ್ತಿದ್ದಂತೆ ನಗರಸಭೆಯಲ್ಲಿ ರಾಜಕೀಯ ಲೆಕ್ಕಾಚಾರಗಳು ಗರಿಗೆದರಿವೆ. ಸ್ಪರ್ಧಾಕಾಂಕ್ಷಿಗಳು ತಮ್ಮ ತಮ್ಮ ವಾರ್ಡುಗಳ ಜನರ ಓಲೈಕೆಯಲ್ಲಿ ತೊಡಗಿದ್ದಾರೆ. ಎಲ್ಲರೂ ಗೆಲ್ಲುವ ಹುಮ್ಮಸ್ಸು ತೋರುತ್ತಿದ್ದಾರಾದರೂ ಮತದಾರ ಪ್ರಭುವಿನ 5 ವರ್ಷದ ಕಹಿ ಅನುಭವ, ನಗರಸಭೆಯ ಮೇಲೆ ಉಂಟಾಗಿರುವ ಜುಗುಪ್ಸೆ ಚುನಾವಣೆಯ ಪ್ರಮುಖ ವಿಚಾರವಾದರೂ ಅಚ್ಚರಿಯೇನಿಲ್ಲ.
ಈ ಬಾರಿ ಜಾತಿ ಮತ್ತು ಹಣಬಲ ಪ್ರಮುಖ ಪಾತ್ರ ವಹಿಸಲಿದೆ. ಹಾಲಿ ಸದಸ್ಯರೊಬ್ಬರ ಅಭಿಪ್ರಾಯದ ಪ್ರಕಾರ ಕನಿಷ್ಠ 10 ಲಕ್ಷ ಖರ್ಚು ಮಾಡಿದ್ರೆ ಗೆಲವಿನ ಕನಸು ಕಾಣಬಹುದಂತೆ. ಇನ್ನು ಹಾಲಿ ಸದಸ್ಯರಲ್ಲಿ ಅನೇಕರು ಸ್ಪರ್ಧೆಯಿಂದ ಹಿಂದೆ ಸರಿಯುವ ಚಿಂತನೆಯಲ್ಲಿದ್ದಾರೆ. ಮತ್ತೆ ಕೆಲವರು ಮತ್ತೊಂದು ಬಾರಿ ಅದೃಷ್ಟವನ್ನು ಪಣಕ್ಕಿಡುವ ಸಾಹಸ ಮಾಡುತ್ತಿದ್ದಾರೆ. ಆದರೆ ಕಳೆದ ಬಾರಿ ಸ್ಪರ್ಧಿಸಿದ್ದ ಪಕ್ಷದಿಂದಲೇ ಸ್ಪರ್ಧಿಸ್ತಾರೆ ಎನ್ನೋದು ಗ್ಯಾರೆಂಟಿ ಇಲ್ಲ.
150 ಮಂದಿ ಸ್ಪರ್ಧಿಗಳು: ಒಂದು ಸಾಮಾನ್ಯ ಅಂದಾಜಿನ ಪ್ರಕಾರ ಈ ಬಾರಿ 31 ಕ್ಷೇತ್ರಗಳಿಗೆ ಕನಿಷ್ಠ 150-180 ಮಂದಿ ಸ್ಪರ್ಧಾಕಾಂಕ್ಷಿಗಳು ಚುನಾವಣಾ ಅಖಾಡಕ್ಕಿಳಿಯಲಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಹುದು. ಇನ್ನು ಕೆಜೆಪಿ, ಕನ್ನಡಪಕ್ಷ, ಬಿಎಸ್ಪಿ, ಸಿಪಿಐ (ಎಂ) ತಮ್ಮ ಪ್ರಭಾವವಿರುವ ಕ್ಷೇತ್ರಗಳತ್ತ ಗಮನ ಕೇಂದ್ರೀಕರಿಸುತ್ತವೆ. ಪಕ್ಷೇತರ ಅಭ್ಯರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕಿಳಿವ ನಿರೀಕ್ಷೆ ಇದೆ.
ಅದೇನೇ ಇದ್ದರೂ 2007ರ ಮೀಸಲಾತಿ ಅನ್ವಯ ಚುನಾವಣೆ ನಡೆಯುತ್ತಿದ್ದು, ಪರಿಚಿತ ಕ್ಷೇತ್ರಗಳಲ್ಲಿ ಸ್ಪರ್ಧಿಗಳು ಹೆಚ್ಚೇನೂ ಕಸರತ್ತು ನಡೆಸಬೇಕಿಲ್ಲ. ಉಳಿದಂತೆ ಕಳೆದ ಬಾರಿಯ ಪರಾಜಿತ ಅಭ್ಯರ್ಥಿಗಳು ಈ ಬಾರಿ ಸರ್ವಸನ್ನದ್ಧವಾಗಿ ಕೆಲ ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಅದೇ ರೀತಿ ಐಕಾನ್ ನಾಯಕರೂ ಕೂಡ ನಗರಸಭೆ ಸದಸ್ಯರಾಗಲು ಉತ್ಸಾಹ ತೋರಿದ್ದು, ಜನ ಆಶೀರ್ವದಿಸುತ್ತಾರಾ ಕಾದು ನೋಡಬೇಕು.
- ಕೆ.ಆರ್.ರವಿಕಿರಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement