ದೌರ್ಜನ್ಯ ತಡೆ ಎಲ್ಲರ ಕರ್ತವ್ಯ: ನ್ಯಾ.ಸುರೇಶ್
ರಾಮನಗರ: ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟುವುದು ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ನ್ಯಾಯಾಧೀಶ ಕೆ.ಸುರೇಶ್ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಾರ್ತಾ ಇಲಾಖೆ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಶನಿವಾರ ನಡೆದ ಮಹಿಳೆಯರು, ಮಕ್ಕಳ ಕಳ್ಳ ಸಾಗಾಣಿಕೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಅರಿವು ಮೂಡಿಸುವ ಬೃಹತ್ ಜಾಥಾ, ವಿಚಾರ ಸಂಕಿರಣ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ವ್ಯಾಪಕವಾಗಿದೆ. ಉದ್ಯೋಗ ಕೊಡಿಸುವುದು ಸೇರಿದಂತೆ ಮತ್ತಿತರ ಆಸೆ-ಆಮಿಷಗಳನ್ನೊಡ್ಡಿ ವೇಶ್ಯಾವೃತ್ತಿ, ಭಿಕ್ಷಾಟನೆ, ಅಂಗಾಂಗಗಳ ಮಾರಾಟ, ಬ್ಯೂಟಿ ಪಾರ್ಲರ್, ಬಾರ್‌ಗಳಲ್ಲಿ ಮನರಂಜನೆ ಉದ್ದೇಶಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ದೌರ್ಜನ್ಯ ತಡೆ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ಇದಕ್ಕೆ ಸಂಘ-ಸಂಸ್ಥೆಗಳು ಹಾಗೂ ಅಂಗನವಾಡಿ ಕಾರ್ಯರ್ತೆಯರ ಪಾತ್ರ ಬಹುಮುಖ್ಯ. ಮಹಿಳೆಯರು ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗಬಾರದು. ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗುವ ಮೂಲಕ ಉತ್ತಮ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯಾಯಾಧೀಶೆ ವಿ.ಪುಷ್ಪಾವತಿ ಮಾತನಾಡಿದರು. ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆಯ ವಾಸ್ತವ ಸ್ಥಿತಿ ಮತ್ತು ದುಷ್ಪರಿಣಾಮಗಳ ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ತಾಜ್‌ವುದ್ದೀನ್‌ಖಾನ್ ಮಾತನಾಡಿದರು.
ಮಕ್ಕಳ ಕಲ್ಯಾಣ ಸಮಿತಿಯ ದ್ಯೇಯೋದ್ದೇಶಗಳು ಮತ್ತು ದತ್ತು ಪ್ರಕ್ರಿಯೆ ಕುರಿತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಶಿವಲಿಂಗಯ್ಯ ಉಪನ್ಯಾಸ ನೀಡಿದರು. ಮಹಿಳೆಯರ ದೌರ್ಜನ್ಯದ ವಿರುದ್ಧ ಜಾಗೃತಿ ನಾಟಕವನ್ನು ಸಮರ್ಪಣಾ ಸಾಂಸ್ಕೃತಿಕ ಕಲಾ ಬಳಗವು ನಡೆಸಿಕೊಟ್ಟಿತು.
ಕಾರ್ಯಕ್ರಮದಲ್ಲಿ ಜಿ.ಪಂ. ಉಪ ಕಾರ್ಯದರ್ಶಿ ಡಾ.ಸಿ.ಸಿದ್ದರಾಮಯ್ಯ, ಮೈಸೂರು ಒಡನಾಡಿ ಸಂಸ್ಥೆಯ ಕಾರ್ಯದರ್ಶಿ ಸ್ಟ್ಯಾನ್ಲಿ, ವಕೀಲರ ಸಂಘದ ಅಧ್ಯಕ್ಷ ಟಿ.ಕೆ.ಶಾಂತಪ್ಪ, ಕಾರ್ಯದರ್ಶಿ ಎಂ.ಜಿ.ಮಹೇಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ತಿಮ್ಮಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಎಸ್.ಎಂ.ಚಂದ್ರ, ಮಕ್ಕಳ ರಕ್ಷಣಾಧಿಕಾರಿ ಕೆ.ರಾಧಾ, ಸಿ.ಎಸ್.ನಾಗಲಾಂಬಿಕೆ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸಿ.ವಿ.ಜಾರ್ಜ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಯ್ಯ ಮತ್ತಿತರರು ಹಾಜರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಅರಿವು ಮೂಡಿಸಲು ನಗರದ ಪ್ರಮುಖ ಬೀದಿಗಳಲ್ಲಿ ಅರಿವು ಜಾಥಾ ನಡೆಯಿತು. ಜಾಥಾಕ್ಕೆ ನ್ಯಾಯಾಧೀಶ ಕೆ.ಸುರೇಶ್ ಚಾಲನೆ ನೀಡಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಜಾಥಾದಲ್ಲಿ ಭಾಗವಹಿಸಿದ್ದರು.