ಬಿಜೆಪಿ ಸಭೆಗೆ ಯೋಗೇಶ್ವರ್ ಗೈರು
ರಾಮನಗರ: ಪೌರ ಸಂಸ್ಥೆಗಳ ಚುನಾವಣೆ ಸಂಬಂಧ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಕರೆದಿದ್ದ ಮಹತ್ವದ ಸಭೆಗೆ ಪಕ್ಷದ ರಾಮನಗರ ಜಿಲ್ಲಾಧ್ಯಕ್ಷರೂ ಆಗಿರುವ ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ಗೈರಾಗಿದ್ದರು. ಇದು ಅವರು ಬಿಜೆಪಿಗೆ ಬೆನ್ನು ತೋರುತ್ತಿದ್ದಾರೆ ಎನ್ನುವುದಕ್ಕೆ ಸ್ಪಷ್ಟ ಸಂದೇಶವಾಗಿದೆ.
ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವಾರು ಸಚಿವರು, ಮುಖಂಡರು ಪಾಲ್ಗೊಂಡಿದ್ದರಾದರೂ, ಯೋಗೇಶ್ವರ್ ಗೈರು ಎದ್ದು ಕಾಣುತ್ತಿತ್ತು. ಪಕ್ಷದಿಂದ ಯೋಗೇಶ್ವರ್ ದೂರವಾಗುತ್ತಿರುವ ಬಗ್ಗೆ ವರಿಷ್ಠರಿಗೂ ಮನವರಿಕೆಯಾಗಿದ್ದು, ರಾಮನಗರ ಜಿಲ್ಲೆಯ ಉಸ್ತುವಾರಿಯನ್ನು ಆಯಾ ತಾಲೂಕಿನ ಪ್ರಮುಖರಿಗೆ ವಹಿಸಿ ಕೈತೊಳೆದುಕೊಂಡಿದ್ದಾರೆ.
ಹೇಳಿ ಕೇಳಿ ಜಿಲ್ಲೆಯಲ್ಲಿ ಬಿಜೆಪಿ ಬೇರು ಆಳವಾಗಿಲ್ಲ. ಆದರೂ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಯೋಗೇಶ್ವರ್ ಸಹಿತ ಹಲವರು ಅಧಿಕಾರ ಸವಿದಿದ್ದಾರೆ. ಪ್ರಸಕ್ತ ಚುನಾವಣೆ ಘೋಷಣೆ ಬೆನ್ನಲ್ಲೇ ಎಲ್ಲ ಪಕ್ಷಗಳಲ್ಲಿ ಚಟುವಟಿಕೆ ಬಿರುಸುಗೊಂಡಿದೆ. ಆದರೆ ಬೀಗ ಜಡಿದಿರುವ ಬಿಜೆಪಿ ಕಚೇರಿಯತ್ತ ಸುಳಿಯುವವರಿಲ್ಲ. ವಲಸಿಗರು ಮತ್ತೊಂದು ವಲಸೆಗೆ ಅಣಿಯಾಗುತ್ತಿದ್ದರೆ, ಮೂಲೆಗುಂಪಾಗಿರುವ ಮೂಲ ಕಾರ್ಯಕರ್ತರು ಹತಾಶರಾಗಿದ್ದಾರೆ.