'ಬೆಲೆ ಏರಿಕೆಗೆ ಪೂರಕ ಕನಿಷ್ಠ ವೇತನ ಜಾರಿಯಾಗಲಿ'
ದೊಡ್ಡಬಳ್ಳಾಪುರ: ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಪೂರಕವಾಗಿ ದುಡಿಯುವ ವರ್ಗಕ್ಕೆ ಕನಿಷ್ಠ ವೇತನ ಜಾರಿಗೊಳಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಅಸಂಘಟಿತ ವಲಯದ ಕಾರ್ಮಿಕರನ್ನೂ ಸೇರಿಸಿ ಎಲ್ಲ ಬಗೆಯ ದೈಹಿಕ ಶ್ರಮ ಆಧಾರಿತ ಕಾರ್ಮಿಕರಿಗೆ ಮಾಸಿಕ ಕನಿಷ್ಠ 10000 ವೇತನ ಜಾರಿಗೊಳಿಸಬೇಕು ಎಂದು ಸಿಐಟಿಯು ರಾಜ್ಯ ಸಮಿತಿ ಕಾರ್ಯದರ್ಶಿ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.
ನಗರದ ಹೊರವಲಯದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬ್ಯಾಂಕ್ ವೃತ್ತದಲ್ಲಿ ಸಿಐಟಿಯು ತಾಲೂಕು ಸಮಿತಿಯ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಲೆ ಏರಿಕೆ, ಭ್ರಷ್ಟಾಚಾರ, ದುರಾಡಳಿತದ ಮೂಲಕ ಜನ ವಿರೋಧಿಯಾಗಿರುವ ಸರ್ಕಾರಗಳಿಗೆ ಪರ್ಯಾಯವಾಗಿ ಜನಪರ ಸರ್ಕಾರದ ನೀತಿಗಳಿಗಾಗಿ ಎಲ್ಲರೂ ಒತ್ತಾಯಿಸಬೇಕಾಗಿದೆ. ಈ ನಿಟ್ಟಿನಲ್ಲಿ ಫೆ.20, 21ರಂದು ಸಿಐಟಿಯು ನೇತೃತ್ವದಲ್ಲಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯುತ್ತಿದೆ. ತಾಲೂಕಿನಲ್ಲಿ ಕಾರ್ಮಿಕರು ಸಂಘಟಿತರಾಗಿ ಮುಷ್ಕರ ಬೆಂಬಲಿಸಬೇಕಿದೆ ಎಂದರು.
ಭವಿಷ್ಯ ನಿಧಿ, ಬೋನಸ್ ನೀಡುವ ಹಂತದಲ್ಲಿ ಸೂಕ್ತ ಕಾಯಿದೆಗಳನ್ನು ಸರ್ಕಾರ ಜಾರಿಗೊಳಿಸಬೇಕು. ಖಾಸಗಿ ವಲಯದಲ್ಲೂ ಪಿಂಚಣಿ, ಮೀಸಲಾತಿಗೆ ಚಿಂತನೆ ನಡೆಯಬೇಕಿದೆ. ಸಾಮಾಜಿಕ ಸುರಕ್ಷತಾ ನಿಧಿ ಸ್ಥಾಪನೆಗೆ ಪೂರಕವಾಗಿ ಸಂಪನ್ಮೂಲಗಳನ್ನು ಒದಗಿಸುವ ಕೆಲಸವೂ ಅಗಬೇಕು. ಕಳೆದ ವರ್ಷದಲ್ಲಿ ಮಾಲೀಕರಿಗೆ ಗರಿಷ್ಠ 1.28 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಿರುವ ಸರ್ಕಾರ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸುವ ಸೌಜನ್ಯ ತೋರಿಲ್ಲ ಎಂದು ಟೀಕಿಸಿದರು.
ತಾಲೂಕು ಸಿಐಟಿಯು ಮುಖಂಡ ಪಿ.ಎ. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಮುಖಂಡ ಮುನಿಪಾಪಯ್ಯ, ಭರತ್ ಬೊಂಸ್ಲೆ, ನವೀನ್‌ರಾಜ್, ಪ್ರಭಾಕರ್ ಇದ್ದರು.