ವಿದ್ಯಾರ್ಥಿಗಳಿಂದ ನಾಗೇನಹಳ್ಳಿ ಚರಂಡಿಗಳ ಪುನಶ್ಚೇತನ
ದೊಡ್ಡಬಳ್ಳಾಪುರ: ಇಲ್ಲಿನ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಕ್ರಿಯ ಶ್ರಮದಾನದ ಮೂಲಕ ಕಳೆದ 3 ದಿನಗಳಿಂದ ತಾಲೂಕಿನ ಎಸ್.ನಾಗೇನಹಳ್ಳಿಯಲ್ಲಿ ಚರಂಡಿಗಳ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕಾಲೇಜಿನ ಎನ್ಎಸ್ಎಸ್ ಘಟಕಗಳ ಜಂಟಿ ಸಹಯೋಗದಲ್ಲಿ ಆಯೋಜನೆಗೊಂಡಿರುವ ವಿಶೇಷ ಯುವಜನ ಸೇವಾ ಶಿಬಿರದ ಅಂಗವಾಗಿ ನೈರ್ಮಲ್ಯ ಸುಧಾರಣೆಗೆ ಒತ್ತು ನೀಡಲಾಗಿದೆ.
ಗ್ರಾಮದಲ್ಲಿ ನೀರು ಹರಿಯದೆ ಕೊಚ್ಚೆಗಟ್ಟಿನಿಂತು ನಾರುತ್ತಿದ್ದ ಚರಂಡಿಗಳನ್ನು ಸ್ವಚ್ಛಗೊಳಿಸುವುದು, ಹೊಸ ಚರಂಡಿಯ ನಿರ್ಮಾಣ ಸೇರಿದಂತೆ ವಿವಿಧ ಶ್ರಮದಾನ ಕಾರ್ಯದಲ್ಲಿ ಕಾಲೇಜಿನ 58 ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಕ್ರಿಯ ಪಾತ್ರ ನಿರ್ವಹಿಸುತ್ತಿದ್ದಾರೆ. 5 ವಿಭಿನ್ನ ತಂಡಗಳೊಂದಿಗೆ ಕಾರ್ಯಯೋಜನೆಗಿಳಿದಿರುವ ವಿದ್ಯಾರ್ಥಿಗಳು ಪ್ರತಿದಿನ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಶ್ರಮದಾನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಶ್ರಮದಾನದೊಟ್ಟಿಗೆ ಸಂಜೆ ವಿವಿಧ ಉಪನ್ಯಾಸ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳು ನಡೆಯುತ್ತಿವೆ. ವಿವಿಧ ತಂಡಗಳಿಂದ ಜಾನಪದ, ಸಾಂಸ್ಕೃತಿಕ ಕಾಯಕ್ರಮಗಳು ಆಯೋಜನೆಗೊಂಡಿವೆ. ಶಿಬಿರದ ನಿರ್ದೇಶಕರು, ಶಿಬಿರಾಧಿಕಾರಿಗಳು, ಸಹ ಶಿಬಿರಾಧಿಕಾರಿಗಳು, ಶಿಬಿರಾರ್ಥಿಗಳ ನೇತೃತ್ವದಲ್ಲಿ ಗ್ರಾಮಸ್ಥರ ಸಹಕಾರದಲ್ಲಿ ಶಿಬಿರ ಯಶಸ್ವಿಯಾಗಿ ನಡೆಯುತ್ತಿದ್ದು, ಫೆ.20ರ ಬುಧವಾರ ಸಮಾರೋಪಗೊಳ್ಳಲಿದೆ.