ಶ್ರೀನಿವಾಸ ಸ್ವಾಮಿ ಬ್ರಹ್ಮರಥೋತ್ಸವ
ಕನಕಪುರ: ಚಿಕ್ಕತಿರುಪತಿ ಎಂದೇ ಪ್ರಸಿದ್ಧವಾಗಿರುವ ಕನಕಪುರ ತಾಲೂಕು ಕಲ್ಲಹಳ್ಳಿ ಗ್ರಾಮದ ಶ್ರೀ ಶ್ರೀನಿವಾಸಸ್ವಾಮಿ ಮಹಾ ಬ್ರಹ್ಮರಥೋತ್ಸವ ಸಮಾರಂಭ ಫೆ.25 ರಂದು ನಡೆಯಲಿದೆ. ಬ್ರಹ್ಮರಥೋತ್ಸವದ ಅಂಗವಾಗಿ ಪೂಜಾ ವಿಧಿವಿಧಾನಗಳು ನಡೆಯಲಿದ್ದು, ಫೆ.21 ರಂದು ತಿರುಮಂಜನಸೇವೆ, ಅಂಕುರಾರ್ಪಣ, ಧ್ವಜಾರೋಹಣ, ಭೇರಿತಾಡನ, ಶೇಷವಾಹನೋತ್ಸವಗಳು ನಡೆಯಲಿವೆ. ಫೆ.22 ರಂದು ಅಶ್ವತ್ಥಪೂಜೆ, ಕಲ್ಯಾಣೋತ್ಸವ, ಪುಷ್ಟಮಂಟ ಪೋತ್ಸವ, ಫೆ.23 ರಂದು ಪ್ರಹ್ಲಾದ ಪರಿಪಾಲನೋತ್ಸವ, ಪೀಟಿಕಾ ಉತ್ಸವಗಳು, ಫೆ.24 ರಂದು ಪೀಟಿಕಾ ಉತ್ಸವ, ಗಜೇಂದ್ರಮೋಕ್ಷ, ಗರುಡೋತ್ಸವಗಳು, ಫೆ.25 ರಂದು ಮಧ್ಯಾಹ್ನ ಮಹಾಬ್ರಹ್ಮ ರಥೋತ್ಸವ, ಧೂಳಿ ಉತ್ಸವ, ಮಂಟಪ್ಪಡಿ ಪೂಜೆ, ರಾತ್ರಿ ಹನುಮೋತ್ಸವ, ಪಟಾಕಿ, ಬಾಣ ಬಿರುಸುಗಳ ಪ್ರದರ್ಶನ, ಮುತ್ತಿನಪಲ್ಲಕ್ಕಿ ಮೆರವಣಿಗೆ ನಡೆಯಲಿವೆ. ಫೆ.26 ರಂದು ಅಶ್ವವಾಹನೋತ್ಸವ, ಗರುಡೋತ್ಸವ, ಫೆ.27 ರಂದು ವಸಂತೋತ್ಸವ, ತೀರ್ಥಸ್ನಾನ,ಧ್ವಜ ಅವರೋಹಣ, ಫೆ.28 ರಂದು ಮಹಾಭಿಷೇಕ, ಶಯನೋತ್ಸವ, ಪುಷ್ಪಯಾಗ, ಫೆ.29 ರಂದು ರಾತ್ರಿ ಶಯನೋತ್ಸವ ನಡೆಯಲಿವೆ. ಮಾ.3 ರಂದು ರಾತ್ರಿ ಪುಷ್ಪವಿಮಾನೋತ್ಸವ ಸೇವೆ, ಪೇಟೆ ಉತ್ಸವಗಳು ನಡೆಯಲಿದೆ ಎಂದು ಪ್ರಧಾನ ಅರ್ಚಕ ಆರ್. ಸುದರ್ಶನ್ ತಿಳಿಸಿದ್ದಾರೆ.
ಆಸ್ತಿ ತೆರಿಗೆಯಿಂದ 1.5 ಕೋಟಿ ನಿರೀಕ್ಷೆ
ಕನಕಪುರ: ಕನಕಪುರ ಪುರಸಭೆಯ 2013-14 ನೇ ಸಾಲಿನ ವಾರ್ಷಿಕ ಆಯವ್ಯಯ ಮಂಡನಾ ಸಭೆ ಪುರಸಭಾಧ್ಯಕ್ಷ ಆರ್. ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಇಲ್ಲಿನ ಪುರಸಭಾ ಸಭಾಂಗಣದಲ್ಲಿ ನಡೆಯಿತು. ಪುರಸಭಾ ಮುಖ್ಯಾಧಿಕಾರಿ ಮಾಯಣ್ಣಗೌಡ ಸಭೆಯ ಕಲಾಪಗಳನ್ನು ಮಂಡಿಸಿದರು. ಉಪಾಧ್ಯಕ್ಷೆ ನಿರ್ಮಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಮೊಯಿದ್ದೀನ್ ಪಾಲ್ಗೊಂಡಿದ್ದರು. ಕನಕಪುರ ಪುರಸಭೆಯು ಈಗಾಗಲೇ ನಿರ್ಮಿಸಿರುವ ಮಳಿಗೆಗಳಿಂದ 35ಲಕ್ಷ ಬಾಡಿಗೆ ಸಂಗ್ರಹವಾಗುತ್ತಿದ್ದು, ಆಸ್ತಿ ತೆರಿಗೆಯಿಂದ ದಾಖಲೆಯ ಒಂದೂವರೆ ಕೋಟಿ ಆದಾಯದ ನಿರೀಕ್ಷೆಯಿದೆ. ಪ್ರಸಕ್ತ ಸಾಲಿನಲ್ಲಿ ಅಭಿವೃದ್ಧಿ ಕಾರ್ಯಗಳ ನಂತರವೂ 1.36 ಕೋಟಿ ಉಳಿತಾಯದ ಬಜೆಟ್ ಮಂಡಿಸಲಾಗುತ್ತಿದೆ ಎಂದು ಮುಖ್ಯಾಧಿಕಾರಿ ಮಾಯಣ್ಣಗೌಡ ತಿಳಿಸಿದರು. ಕನಕಪುರದ ಅರ್ಕಾವತಿ ಸೇತುವೆ ಸಮೀಪ ರಸ್ತೆ ಕಿರಿದಾಗಿರುವ ಕಾರಣ ಅಪಘಾತಗಳ ಸಂಖ್ಯೆ ಮೇರೆ ಮೀರಿದೆ. ಜನರ ತಿಳಿವಳಿಕೆಗಾಗಿ ದಾರಿಯುದ್ದಕ್ಕೂ ಸೈನ್ಬೋರ್ಡ್ಗಳನ್ನು ಅಳವಡಿಸುವ ಹಾಗೂ ಘನತ್ಯಾಜ್ಯವಸ್ತುಗಳ ವಿಲೇವಾರಿಗಾಗಿ ಶಿವನಹಳ್ಳಿ ಸಮೀಪ ಖರೀದಿಸಿರುವ ಭೂಮಿಗೆ ಕಾಂಪೌಂಡ್ ನಿರ್ಮಿಸುವ ಅಗತ್ಯವಿದೆ. ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಹೆಚ್ಚುವರಿಯಾಗಿ ಇನ್ನೂ ಮೂರು ಓವರ್ ಹೆಡ್ ಟ್ಯಾಂಕ್ಗಳ ನಿರ್ಮಾಣವಾಗಬೇಕಿದೆ ಎಂದು ಪುರಸಭಾಧ್ಯಕ್ಷ ಕೃಷ್ಣಮೂರ್ತಿ ನುಡಿದರು. ಕಳೆದ 2 ವರ್ಷಗಳಿಂದ ಶಾಸಕರ ವಿವೇಚನಾ ನಿಧಿ ಅನುದಾನದಲ್ಲಿ ಪಟ್ಟಣವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯ ನಡೆದಿವೆ ಎಂದು ಮುಖ್ಯಾಧಿಕಾರಿ ಮಾಯಣ್ಣಗೌಡ ತಿಳಿಸಿದರು.