ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

14000 ಎಕರೆ ಅರಣ್ಯ ಒತ್ತುವರಿ, ತೆರವು 37 ಎಕರೆ

Mainashree
Updated On : 19 Feb 2013, 10:29 am

 ಕೆರೆ ಮಂಜುನಾಥ್
ಬೆಂಗಳೂರು:
ಅರಣ್ಯ ಭೂಮಿ ಒಂದಿಂಚು ಒತ್ತುವರಿಗೂ ಬಿಡುವುದಿಲ್ಲ...
ಮುಖ್ಯಮಂತ್ರಿ, ಅರಣ್ಯ ಸಚಿವರಿಂದ ಹಿಡಿದು ಎಲ್ಲ ಹಿರಿಯ ಅಧಿಕಾರಿಗಳ ಈ ಮಾತು ಎಂದೂ ಕಾರ್ಯಗತವಾಗಿಲ್ಲ. ಏಕೆಂದರೆ ಅರಣ್ಯ ಒತ್ತುವರಿ ತೆರವು- ಒಂದು ರೀತಿಯ ರಾಜಕೀಯ ಸ್ಟಂಟ್.
ರಾಜಕೀಯಕ್ಕೆ ಅಗತ್ಯವಾದಾಗಲೆಲ್ಲ ಈ ವಿಷಯಕ್ಕೆ ಜೀವ ಬರುತ್ತದೆ. ಉಳಿದ ಸಮಯದಲ್ಲಿ ಆ ಕಡತಗಳು ಶವಪಟ್ಟಿಗೆಯಲ್ಲಿ ಭದ್ರ. ಹೀಗಾಗಿಯೇ ವರ್ಷಗಳು ಉರುಳಿದರೂ, ಸಾವಿರಾರು ಎಕರೆ ಒತ್ತುವರಿಯಾಗಿದ್ದರೂ, ಆಗುತ್ತಿದ್ದರೂ ಕ್ರಮ ಮಾತ್ರ ಆಗುವುದಿಲ್ಲ. ಆದ್ದರಿಂದಲೇ ನಗರದ ಸುತ್ತಮುತ್ತ 14 ಸಾವಿರ ಎಕರೆ ಒತ್ತುವರಿಯಾಗಿದ್ದರೂ ಬೆರಳೆಣಿಕೆಯಷ್ಟು ಮಾತ್ರ ತೆರವಾಗಿದೆ.
ಹೌದು, ಬೆಂಗಳೂರು ಹಾಗೂ ಸುತ್ತಮುತ್ತಲಿನ ಎರಡು ಜಿಲ್ಲೆಗಳಲ್ಲಿ ಒಟ್ಟು 14,728 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಇದರಲ್ಲಿ 4233 ಎಕರೆ ಭೂಮಿಯನ್ನು ಕಬಳಿಕೆದಾರರ ಹೆಸರಿನಲ್ಲೇ ಖಾತೆ ಮಾಡಿಕೊಡಲಾಗಿದೆ. ತೆರವು ಮಾಡಿರುವುದು ಕೇವಲ 37 ಎಕರೆ ಅಷ್ಟೇ.
ಬೆಂಗಳೂರು ನಗರ ಅರಣ್ಯ ವಿಭಾಗದಲ್ಲಿ 459 ಒತ್ತುವರಿದಾರರು 1400.85 ಎಕರೆ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ 690 ಒತ್ತುವರಿದಾರರು 1173.72 ಎಕರೆ, ರಾಮನಗರದಲ್ಲಿ 7068 ಒತ್ತುವರಿದಾರರು 11598.67 ಎಕರೆ ಹಾಗೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ 434 ಒತ್ತುವರಿದಾರರು 551.03 ಎಕರೆ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ.
ಬೆಂಗಳೂರು ವೃತ್ತ ವ್ಯಾಪ್ತಿಯಲ್ಲಿ ಕಗ್ಗಲೀಪುರದಲ್ಲಿ ನಾಲ್ಕು ಜನಕ್ಕೆ 20 ಎಕರೆ 38 ಗುಂಟೆ ಅರಣ್ಯ ಭೂಮಿಯನ್ನು ಖಾತೆ ಮಾಡಿಕೊಡಲಾಗಿದೆ. ಬೆಂಗಳೂರು ಗ್ರಾಮಾಂತರದ ಹೊಸಕೋಟೆಯಲ್ಲಿ 134 ಜನರಿಗೆ 223 ಎಕರೆ 16 ಗುಂಟೆ, ದೊಡ್ಡಬಳ್ಳಾಪುರದಲ್ಲಿ 96 ಜನರಿಗೆ 30 ಎಕರೆ, ನೆಲಮಂಗಲದಲ್ಲಿ 31 ಜನರಿಗೆ 265 ಎಕರೆ 20 ಗುಂಟೆ, ದೇವನಹಳ್ಳಿಯಲ್ಲಿ ಇಬ್ಬರಿಗೆ 51 ಎಕರೆ 11 ಗುಂಟೆ; ರಾಮನಗರದಲ್ಲಿ 432 ಜನರಿಗೆ 814 ಎಕರೆ 8 ಗುಂಟೆ, ಕನಕಪುರ ಸಾತನೂರಿನಲ್ಲಿ 91 ಜನರಿಗೆ 337 ಎಕರೆ 24 ಗುಂಟೆ, ಚನ್ನಪಟ್ಟಣದಲ್ಲಿ 1054 ಜನರಿಗೆ 2655 ಎಕರೆ 37 ಗುಂಟೆ, ಮಾಗಡಿಯಲ್ಲಿ 275 ಜನರಿಗೆ 417 ಎಕರೆ 8 ಗುಂಟೆ ಅರಣ್ಯ ಭೂಮಿ ಖಾತೆಯಾಗಿದೆ.
ಅಂದರೆ ಈ ವೃತ್ತದಲ್ಲಿ 1852 ಜನರು 4233 ಎಕರೆ 77 ಗುಂಟೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ಕಾನೂನು ಉಲ್ಲಂಘಿಸಿ ಆ ಕಬಳಿಕೆದಾರರಿಗೇ ಖಾತೆ ಮಾಡಿಕೊಡಲಾಗಿದೆ. ಇಂತಹ ಅಧಿಕಾರಿಗಳ ಮೇಲೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾನುನುಗೆ ವಿರುದ್ಧವಾಗಿ ಭೂಮಿ ಮಂಜೂರು ಮಾಡಲಾಗಿದೆ. ಅದನ್ನು ರದ್ದುಪಡಿಸಿ ಎಂದು ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದಾರೆ. ಅದು ಕಡತದಲ್ಲೇ ಉಳಿದಿದೆ.
ರಾಮನಗರ ಉಪವಿಭಾಗಾಧಿಕಾರಿ ಸಿ. ಕೃಷ್ಣೇಗೌಡ ದೊಡ್ಡಮಣ್ಣುಗುಡ್ಡೆಯಲ್ಲಿ 1985ರಲ್ಲಿ ಅರಣ್ಯ ಭೂಮಿ ಮಂಜೂರು ಮಾಡಿದ್ದಾರೆ. ಇಷ್ಟು ವರ್ಷ ಆದ ಮೇಲೆ ಇವರ ಮೇಲೆ ಇಲಾಖೆ ವಿಚಾರಣೆ ಜರುಗಿಸಲು ಕರಡು ದೋಷಾರೋಪಣೆ ಪಟ್ಟಿ ಜಾರಿ ಮಾಡಲಾಗಿದೆ.
ಈ ಅಂಕಿ - ಅಂಶಗಳನ್ನು ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ಅವರೇ ವಿಧಾನಪರಿಷತ್‌ಗೆ ನೀಡಿದ್ದಾರೆ. ದಯಾನಂದ್ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು ಇಷ್ಟೆಲ್ಲ ಮಾಹಿತಿಯನ್ನು ಸವಿವರವಾಗಿ ನೀಡಿದ್ದಾರೆ. ಅರಣ್ಯ ಭೂಮಿ ತೆರವು ಮಾಹಿತಿ ಮಾತ್ರ ನಾಲ್ಕು ಸಾಲಿನಲ್ಲೇ ಮುಗಿದಿದೆ. ಏಕೆಂದರೆ ಬೆಂಗಳೂರು ವೃತ್ತದಲ್ಲಿ 14 ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದರೂ ತುರಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ ಮಾತ್ರ 37.30 ಎಕರೆ ಭೂಮಿ ತೆರವುಗೊಳಿಸಲಾಗಿದೆ.
ಒತ್ತುವರಿ ತೆರವು ಕಾರ್ಯ ನ್ಯಾಯಾಲಯದಲ್ಲಿದೆ ಎಂಬ ಹೇಳಿಕೆ ಮೂಲಕ ಜವಾಬ್ದಾರಿಯಿಂದ ಸುಲಭವಾಗಿ ನುಣುಚಿಕೊಳ್ಳಬಹುದು. ಆದರೆ, ನ್ಯಾಯಾಲಯವೂ ತೀರ್ಪಿತ್ತಿರುವ ಪ್ರಕರಣಗಳಲ್ಲಿ ಒತ್ತುವರಿ ಏಕೆ ತೆರವಾಗಿಲ್ಲ ಎಂಬುದಕ್ಕೆ ಉತ್ತರಿಸುವ ದಿಟ್ಟತನ ಯಾರಲ್ಲೂ ಇಲ್ಲ.
ಕಾನೂನು ಹೀಗಿದೆ... ಕಡತದಲ್ಲಿ ಭದ್ರವಾಗಿದೆ!
ಅರಣ್ಯ ಕಾಯ್ದೆ 1963ರ ಸೆಕ್ಷನ್ 64ಎ ಪ್ರಕಾರ ಅರಣ್ಯ ಭೂಮಿ ಒತ್ತುವರಿದಾರರ ವಿರುದ್ಧ ಮೊಕದ್ದಮೆ ದಾಖಲಿಸಿ, ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ತೆರವಾದ ಅರಣ್ಯ ಪ್ರದೇಶಗಳನ್ನು ಇಲಾಖೆ ವಶಕ್ಕೆ ಪಡೆದು ನೋಟಿಫಿಕೇಷನ್ ಪ್ರಕಾರ, ಕಾರ್ಯಯೋಜನೆ ಘಟಕದಿಂದ ಮೋಣಿ ಮಾಡಿಸಿ ಗಡಿ ಗುರುತಿಸಿ ಆರ್‌ಎಫ್ ಕಲ್ಲುಗಳನ್ನು ಹಾಕಲಾಗುತ್ತದೆ. ಗಡಿ ಭಾಗದಲ್ಲಿ ಜಾನುವಾರು ನಿರೋಧಕ ಕಂದಕ ನಿರ್ಮಾಣ ಹಾಗೂ ತಡೆಗೋಡೆ ಮತ್ತು ತಂತಿಬೇಲಿಗಳನ್ನು ನಿರ್ಮಿಸಿ, ಇಲಾಖೆಯ ಕಾರ್ಯನಿರ್ವಾಹಕ ಸಿಬ್ಬಂದಿ ನಿರಂತರವಾಗಿ ಗಸ್ತು ತಿರುಗಿ ಪ್ರದೇಶ ರಕ್ಷಣೆ ಮಾಡುತ್ತಾರೆ. ಕಾನೂನು ಹೀಗಿದೆ. ಆದರೆ, ಇದನ್ನು ನಿರ್ವಹಿಸಲಾಗುತ್ತಿಲ್ಲ. ಅದಕ್ಕೆ ದಿನದಿಂದ ದಿನಕ್ಕೆ ಅರಣ್ಯ ಭೂಮಿ ಒತ್ತುವರಿ ಆಗುತ್ತಲೇ ಇದೆ. ತೆರವಿನ ಆದೇಶ ಮಾತ್ರ ಕಡತದಲ್ಲಿ ಭದ್ರವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement