ಕಾರ್ಮಿಕರ ದೇಶವ್ಯಾಪಿ ಮುಷ್ಕರಕ್ಕೆ ಬೆಂಬಲ
ದೊಡ್ಡಬಳ್ಳಾಪುರ: ಅನೇಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆ.20 ಮತ್ತು 21ರಂದು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ದೊಡ್ಡಬಳ್ಳಾಪುರದ ವಿವಿಧ ಕಾರ್ಮಿಕ ಸಂಘಟನೆಗಳು ಬೆಂಬಲ ಘೋಷಿಸಿವೆ.
ಮುಷ್ಕರಕ್ಕೆ ಬೆಂಬಲ ಘೋಷಿಸಿ ಇಲ್ಲಿನ ಸಿಐಟಿಯು ಘಟಕದ ನೇತೃತ್ವದಲ್ಲಿ ಸೋಮವಾರ ದೊಡ್ಡಬಳ್ಳಾಪುರ ನಗರದ ಸಿದ್ಧಲಿಂಗಯ್ಯ ವೃತ್ತದಿಂದ ನಗರಾದ್ಯಂತ ಬೈಕ್ ರ್ಯಾಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಮುಖಂಡರು, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಪೂರಕವಾಗಿ ದುಡಿಯುವ ವರ್ಗಕ್ಕೆ ಕನಿಷ್ಠ ವೇತನ ಜಾರಿಗೊಳಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಅಸಂಘಟಿತ ವಲಯದ ಕಾರ್ಮಿಕರನ್ನೂ ಸೇರಿಸಿ ಎಲ್ಲ ಬಗೆಯ ದೈಹಿಕ ಶ್ರಮ ಆಧಾರಿತ ಕಾರ್ಮಿಕರಿಗೆ ಮಾಸಿಕ ಕನಿಷ್ಠ 10 ಸಾವಿರ ವೇತನ ಜಾರಿಗೊಳಿಸಬೇಕು. ಬೆಲೆ ಏರಿಕೆ, ಭ್ರಷ್ಟಾಚಾರ, ದುರಾಡಳಿತದ ಮೂಲಕ ಜನ ವಿರೋಧಿಯಾಗಿರುವ ಸರ್ಕಾರಗಳಿಗೆ ಪರ್ಯಾಯವಾಗಿ ಜನಪರ ಸರ್ಕಾರದ ನೀತಿಗಳಿಗಾಗಿ ಎಲ್ಲರೂ ಒತ್ತಾಯಿಸಬೇಕಾಗಿದೆ. ಈ ನಿಟ್ಟಿನಲ್ಲಿ ಇದೇ ಫೆ.20 ಮತ್ತು 21ರಂದು ಸಿಐಟಿಯು ನೇತೃತ್ವದಲ್ಲಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಕಾರ್ಮಿಕರು ಸಂಘಟಿತರಾಗಿ ಮುಷ್ಕರವನ್ನು ಬೆಂಬಲಿಸಬೇಕಿದೆ.ಈ ನಿಟ್ಟಿನಲ್ಲಿ ಈ ಜನಜಾಗೃತಿ ಸಭೆ ನಡೆಯುತ್ತಿದೆ ಎಂದರು.
ಭವಿಷ್ಯ ನಿಧಿ, ಬೋನಸ್ ನೀಡುವ ಹಂತದಲ್ಲಿ ಸೂಕ್ತ ಕಾಯಿದೆಗಳನ್ನು ಸರ್ಕಾರ ಜಾರಿಗೊಳಿಸಬೇಕು. ಖಾಸಗಿ ವಲಯದಲ್ಲೂ ಪಿಂಚಣಿ, ಮೀಸಲಾತಿಗೆ ಚಿಂತನೆ ನಡೆಯಬೇಕಿದೆ. ಸಾಮಾಜಿಕ ಸುರಕ್ಷತಾ ನಿಧಿ ಸ್ಥಾಪನೆಗೆ ಪೂರಕವಾಗಿ ಸಂಪನ್ಮೂಲಗಳನ್ನು ಒದಗಿಸುವ ಕೆಲಸವೂ ಅಗಬೇಕು. ಕಳೆದ ವರ್ಷದಲ್ಲಿ ಮಾಲೀಕರುಗಳಿಗೆ ಗರಿಷ್ಠ 1.28ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಿರುವ ಸರ್ಕಾರ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸುವ ಸೌಜನ್ಯವನ್ನೂ ತೋರಿಲ್ಲ ಎಂದು ಟೀಕಿಸಿದರು. ತಾಲೂಕು ಸಿಐಟಿಯು ಮುಖಂಡ ಪಿ.ಎ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.