ಪೌರ ಸಂಸ್ಥೆಗಳ ಚುನಾವಣೆ ಸೆಮಿಫೈನಲ್ ಇದ್ದಂತೆ
ರಾಮನಗರ: ಪ್ರಸಕ್ತ ಪೌರ ಸಂಸ್ಥೆಗಳ ಚುನಾವಣೆ ಸೆಮಿಫೈನಲ್ ಇದ್ದಂತೆ. ಇಲ್ಲಿ ಗೆದ್ದರೆ ಮುಂದಿನ ವಿಧಾನಸಭೆ ಚುನಾವಣೆಯ ಫೈನಲ್ ಗೆಲವಿನ ವಿಶ್ವಾಸ ಮೂಡಲಿದೆ ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ನಗರಸಭೆ ಚುನಾವಣೆ ಸ್ಪರ್ಧಾಕಾಂಕ್ಷಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಒಗ್ಗಟ್ಟಿನಿಂದ ಶ್ರಮಿಸಿದರೆ ಪಕ್ಷವು ಮತ್ತೆ ನಗರಸಭೆ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದರು.
ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಈ ಚುನಾವಣೆಯಲ್ಲಿ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಹೋರಾಟ ನಡೆಸಬೇಕು. ಗೆಲವೊಂದನ್ನೇ ಗುರಿಯಾಗಿಟ್ಟುಕೊಂಡು ಹೋರಾಟ ನಡೆಸಬೇಕು. ವೈಯಕ್ತಿಕ ದ್ವೇಷಾಸೂಯೆ, ಭಿನ್ನಮತಕ್ಕೆ ಆಸ್ಪದ ನೀಡಬಾರದು ಎಂದು ಕರೆ ನೀಡಿದರು.
ವಿಧಾನಸಭೆಗೆ ದಿಕ್ಸೂಚಿ: ನಗರಸಭೆ ಚುನಾವಣೆಯು ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ. ಕಾರ್ಯಕರ್ತರು ನಗರಸಭೆ ಚುನಾವಣೆಯಲ್ಲಿ ಶ್ರಮಿಸಿ ಉತ್ತಮ ಫಲಿತಾಂಶ ಪಡೆದರೆ, ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದು ಸುಲಭವಾಗುತ್ತದೆ ಎಂದು ಲಿಂಗಪ್ಪ ತಿಳಿಸಿದರು.
ಇಂದು ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ, ಚರಂಡಿ ವ್ಯವಸ್ಥೆ ಹದಗೆಟ್ಟಿದೆ. ದೂರದೃಷ್ಟಿಯುಳ್ಳ ಯೋಜನೆಗಳನ್ನು ಜಾರಿಗೆ ತರುವಲ್ಲಿ ಆಡಳಿತಾರೂಢ ಜೆಡಿಎಸ್ ವಿಫಲವಾಗಿದೆ. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಉತ್ತಮ ಪುರಸಭೆ ಪ್ರಶಸ್ತಿಗೆ ಪಾತ್ರವಾಗಿದ್ದ ರಾಮನಗರ ಈಗ ದಿವಾಳಿಯಾಗಿದೆ ಎಂದರು.
ಎಚ್ಡಿಕೆ ತಾರತಮ್ಯ: ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಚನ್ನಪಟ್ಟಣಕ್ಕೆ ರು.4 ಕೋಟಿ ನೀಡಿ, ರಾಮನಗರವನ್ನು ಕಡೆಗಣಿಸಿದ್ದಾರೆ. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿರುವ ನಗರದ ಪ್ರಜ್ಞಾವಂತ ಮತದಾರರು ಜೆಡಿಎಸ್ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಪರಿಸ್ಥಿತಿಯ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. ನನ್ನನ್ನು ಚುನಾವಣೆಯಲ್ಲಿ ಸೋಲಿಸಿದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗಿಮಿಕ್ ಮಾಡಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಕ್ಕೆ ಬಂದರು. ನಂತರ ತಾಲೂಕಿನ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನೂ ಹಾಕಿಕೊಳ್ಳದೆ ಜನತೆಗೆ ಮೋಸ ಮಾಡುತ್ತಿದ್ದಾರೆ ಎಂದು ಲಿಂಗಪ್ಪ ಆರೋಪಿಸಿದರು.
ಕಾಂಗ್ರೆಸ್ಗೆ ವರದಾನ: ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸೈಯದ್ ಜಿಯಾ ಉಲ್ಲಾ ಮಾತನಾಡಿ 2007ರ ಮೀಸಲಾತಿ ಅನ್ವಯ ಚುನಾವಣೆ ನಡೆಯುತ್ತಿರುವುದು ಕಾಂಗ್ರೆಸ್ಗೆ ವರವಾಗಿದೆ. ಮೊದಲು ಚುನಾವಣೆ ತಂತ್ರಗಳನ್ನು ರೂಪಿಸಿ, ಅದರಂತೆ ಕಾರ್ಯನಿರ್ವಹಿಸಿದರೆ ಗೆಲವು ನಮ್ಮದಾಗುತ್ತದೆ ಎಂದರು.
ಆಕಾಂಕ್ಷಿಗಳು ಫೆ.19ರ ಸಂಜೆ 6ರೊಳಗೆ ಅರ್ಜಿ ಸಲ್ಲಿಸಬೇಕು. ನಂತರ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರ ನೇತೃತ್ವದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಟಿಕೆಟ್ ಹಂಚಿಕೆಯಲ್ಲಿ ಗುಂಪುಗಾರಿಕೆ, ಶಿಫಾರಸಿಗೆ ಅವಕಾಶವಿಲ್ಲ. ಅರ್ಹರಿಗೆ ಮಣೆ ಹಾಕಲಾಗುವುದು ಎಂದು ತಿಳಿಸಿದರು.
ಜನತೆಯ ಮುಂದಿಡಿ: ರಾಮನಗರದ ಅಭಿವೃದ್ಧಿ ವಿಷಯದಲ್ಲಿ ಸಂಸದ ಮತ್ತು ಶಾಸಕರು ಸಂಪೂರ್ಣ ವಿಫಲರಾಗಿದ್ದಾರೆ. ಅವರ ಸ್ವಾರ್ಥ ರಾಜಕಾರಣದಿಂದ ಜನತೆ ರೋಸಿ ಹೋಗಿದ್ದಾರೆ. ಅವರ ಎಲ್ಲ ವೈಫಲ್ಯಗಳನ್ನು ಜನತೆ ಮುಂದಿಟ್ಟು, ಕಾಂಗ್ರೆಸ್ ಪರ ಮತ ಹಾಕಿಸುವಂತೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮರಿದೇವರು ಕಾರ್ಯಕರ್ತರಿಗೆ ಕರೆಯಿತ್ತರು.
ಇದೇ ವೇಳೆ ನಗರಸಭಾ ಸದಸ್ಯ ನಿಜಾಂ ಪಾಷ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾದರು. ಸಭೆಯಲ್ಲಿ ಕೆಪಿಸಿಸಿ ಸದಸ್ಯ ಕೆ.ರಮೇಶ್, ಸಿ.ಎನ್.ಆರ್.ವೆಂಕಟೇಶ್, ಕಾಂತರಾಜ್ ಪಟೇಲ್, ಅಮ್ಜದ್ ಸಾಹುಕಾರ್, ಬಾಬು ಶೇಠ್, ಸಯ್ಯದ್ ಉಮರ್, ಪಾರ್ವತಮ್ಮ ಮತ್ತಿತರರು ಭಾಗವಹಿಸಿದ್ದರು.