ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮೀಸಲು ಪುನರಾವರ್ತನೆ ಪಕ್ಷಗಳಿಗೆ ತಲೆನೋವು

Mainashree
Updated On : 19 Feb 2013, 10:29 am

 ಮತ್ತೀಕೆರೆ ಜಯರಾಮ್
ರಾಮನಗರ:
ಪೌರ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲು ಪುನರಾವರ್ತನೆಯು ರಾಜಕೀಯ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದೆ. ಬಹುತೇಕ ವಾರ್ಡ್‌ಗಳಲ್ಲಿ ಹಾಲಿ ಸದಸ್ಯರೇ ಟಿಕೆಟ್ ಬಯಸಿದ್ದಾರೆ. ಅವರಿಗೆ ಮಣೆ ಹಾಕಿದಲ್ಲಿ ಆಡಳಿತ ವಿರೋಧಿ ಅಲೆಯ ಭೀತಿ ಕಾಡುತ್ತಿದ್ದರೆ, ಟಿಕೆಟ್ ನಿರಾಕರಿಸಿದಲ್ಲಿ ಬಂಡಾಯದ ಬಿಸಿ ತಟ್ಟುವ ಆತಂಕ ಎದುರಾಗಿದೆ.  
ಚುನಾವಣೆ ನಡೆಸುವ ವಿಷಯದಲ್ಲಿ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವಿನ ಹಗ್ಗ ಜಗ್ಗಾಟದಿಂದ ಮೀಸಲು ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಆಯೋಗವು 2007ರಲ್ಲಿ ಇದ್ದ ಮೀಸಲನ್ನೇ ಮರು ನಿಗದಿಪಡಿಸಿದ್ದು, ಶೇಕಡ 90ರಷ್ಟು ಮಂದಿ ಹಾಲಿ ಸದಸ್ಯರು ಮತ್ತು ಕಳೆದ ಬಾರಿಯ ಪರಾಜಿತ ಅಭ್ಯರ್ಥಿಗಳು ಈ ಬಾರಿ ಸ್ಪರ್ಧೆಗೆ ಸಜ್ಜಾಗಿದ್ದಾರೆ.
ಎಲ್ಲೆಡೆ ಅಲೆಯ ಅಬ್ಬರ: ಮೀಸಲು ಪುನರಾವರ್ತನೆಯನ್ನು ಯಾವೊಬ್ಬ ಸದಸ್ಯರೂ ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಕೆಲವರು ಸ್ವತಃ ಗುತ್ತಿಗೆ ನಿರ್ವಹಣೆ, ಪಕ್ಷಪಾತ, ಅಕ್ರಮ ಚಟುವಟಿಕೆಗಳಿಂದ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಜನಪರ ಕೆಲಸ, ಸಜ್ಜನಿಕೆಯಿಂದ ಮರು ಆಯ್ಕೆಯ ಯೋಗ್ಯತೆ ಉಳಿಸಿಕೊಂಡವರು ವಿರಳ. ಕಳೆದ ಬಾರಿಯ ಪರಾಜಿತರ ಪರ ಅನುಕಂಪದ ಅಲೆ ಇದ್ದರೆ, ಹಾಲಿಗಳಿಗೆ ಆಡಳಿತ ವಿರೋಧಿ ಅಲೆಯ ಹಾವಳಿ ತಪ್ಪಿದ್ದಲ್ಲ. ಹೀಗಾಗಿ ಹಾಲಿ ಸದಸ್ಯರನ್ನು ಕಣಕ್ಕಿಳಿಸಿದರೆ ಪಕ್ಷಕ್ಕೆ ದಕ್ಕಬಹುದಾದ ಹಲವು ಸೀಟುಗಳು ಖೋತಾ ಆಗುತ್ತವೆನ್ನುವ ಅಂಶ ಪಕ್ಷಗಳ ಮುಖಂಡರಿಗೆ ಮನವರಿಕೆಯಾಗಿದೆ. ಇದೇ ಕಾರಣಕ್ಕೆ ಹಾಲಿ ಸದಸ್ಯರು ಪಕ್ಷಗಳ ಪಾಲಿಗೆ ಬಾಯಲ್ಲಿರುವ ಬಿಸಿ ತುಪ್ಪವಾಗಿದ್ದಾರೆ.  
ಬಿ ಫಾರಂಗೆ ಪೈಪೋಟಿ: ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪೌರ ಸಂಸ್ಥೆಗಳ ಚುನಾವಣೆ ಸಮರಕ್ಕೆ ರಾಜಕೀಯ ಪಕ್ಷಗಳು ಸಜ್ಜುಗೊಂಡಿವೆ. ಉಮೇದುವಾರಿಕೆ ಸಲ್ಲಿಕೆಗೆ 5 ದಿನ ಮಾತ್ರವೇ ಬಾಕಿ ಇದ್ದು, ರಾಜಕೀಯ ಚಟುವಟಿಕೆ ತೀವ್ರಗೊಂಡಿದೆ. ಪಕ್ಷಗಳಿಂದ ಕಾರ್ಯಕರ್ತರ ಸಭೆಗಳು ನಿರಂತರವಾಗಿ ನಡೆಯುತ್ತಿವೆ. ಬಿ ಫಾರಂಗಾಗಿ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ.ಈ ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿ ಪಕ್ಷಗಳು. ಕಳೆದ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಗಳಿಸಿ ಜೆಡಿಎಸ್ ಪಾರುಪತ್ಯ ಸ್ಥಾಪಿಸಿತ್ತು. ಹೀಗಾಗಿ ಹಾಲಿ ಸದಸ್ಯರಿಗೆ ಟಿಕೆಟ್ ನೀಡಿಕೆ ವಿಷಯದಲ್ಲಿ ಗೊಂದಲದಲ್ಲಿ ಮುಳುಗಿರುವವರು ದಳಪತಿಗಳು. ಕಾಂಗ್ರೆಸ್ ಪಕ್ಷದಲ್ಲೂ ಹಾಲಿ ಸದಸ್ಯರಿಂದ ಟಿಕೆಟ್‌ಗೆ ಒತ್ತಡ ಇದ್ದು, ಮುಖಂಡರಿಗೆ ಕಸಿವಿಸಿ ತಪ್ಪಿದ್ದಲ್ಲ.
ಪರಾಜಿತರಿಗೆ ಡಿಮ್ಯಾಂಡ್: ಹಾಲಿ ಸದಸ್ಯರಿಗೆ ಹೋಲಿಸಿದಲ್ಲಿ ಕಳೆದ ಚುನಾವಣೆಯಲ್ಲಿ ಪರಾಜಿತರಾಗಿದ್ದು, ನಿರಂತರವಾಗಿ ಜನ ಸಂಪರ್ಕದಲ್ಲಿರುವ ಮುಖಂಡರಿಗೆ ಈ ಬಾರಿ ಸಹಜವಾಗಿಯೇ ಪಕ್ಷಗಳಲ್ಲಿ ಡಿಮ್ಯಾಂಡ್ ಇದೆ. ಹಲವು ವಾರ್ಡ್‌ಗಳ ಹಾಲಿ ಸದಸ್ಯರು ಮತ್ತು ಪರಾಜಿತರು ವೈಯಕ್ತಿಕ ಅನುಕೂಲಕ್ಕಾಗಿ ವಲಸೆಗೂ ಸಜ್ಜುಗೊಂಡಿದ್ದಾರೆ. ಕೆಲವರು ಅನ್ಯ ಪಕ್ಷಗಳ ಟಿಕೆಟ್‌ಗೆ ಅರ್ಜಿ ಹಾಕಿ, ಬಣ್ಣ ಬಯಲು ಮಾಡಿಕೊಂಡಿದ್ದಾರೆ.
ಅಭ್ಯರ್ಥಿಗಳ ಆಯ್ಕೆ, ಆಕಾಂಕ್ಷಿತರಿಗೆ ಟಿಕೆಟ್ ನಿರಾಕರಣೆ ವಿಷಯದಲ್ಲಿ ರಾಜಕೀಯ ಪಕ್ಷಗಳಿಗೆ ದಿಗಿಲು ಮೂಡಿದೆ. ಟಿಕೆಟ್ ನಿರಾಕರಿಸಲ್ಪಟ್ಟವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೈ ಕೊಡಬಹುದು ಎನ್ನುವ ಆತಂಕ ಇದ್ದೇ ಇದೆ. ವಿಶೇಷವಾಗಿ ಸಾಮಾನ್ಯ ಕ್ಷೇತ್ರಗಳಲ್ಲಿ ಹಾಲಿಗಳಿಗೆ ಟಿಕೆಟ್ ನಿರಾಕರಿಸುವ ಧೈರ್ಯ ತೋರುತ್ತಿಲ್ಲ. ಪಕ್ಷಗಳ ಮುಖಂಡರದ್ದು ಅಲಗಿನ ಮೇಲಿನ ನಡಿಗೆಯಂತಾಗಿದೆ.  
ತೀವ್ರಗೊಂಡ ತಾಲೀಮು: ರಾಜಕೀಯ ಪಕ್ಷಗಳಲ್ಲಿ ತಾಲೀಮು ತೀವ್ರವಾಗಿದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಹೊಣೆಯನ್ನು ಸ್ವತಃ ಅನಿತಾ ಕುಮಾರಸ್ವಾಮಿಯವರೇ ವಹಿಸಿಕೊಂಡಿದ್ದು, ಕಾರ್ಯಕರ್ತರೊಟ್ಟಿಗೆ ಈಗಾಗಲೇ ಒಂದು ಸುತ್ತಿನ ಸಮಾಲೋಚನೆ ನಡೆಸಿದ್ದಾರೆ. ಯೋಗೇಶ್ವರ್ ಚಿತ್ತ ಕಾಂಗ್ರೆಸ್‌ನತ್ತ ನೆಟ್ಟಿದ್ದು, ಫೆ.20ರ ಸಭೆಯಲ್ಲಿ ಗುಟ್ಟು ರಟ್ಟಾಗಲಿದೆ. ಕಾಂಗ್ರೆಸ್‌ನ ಅಳಿದುಳಿದ ಮುಖಂಡರು ಈಗಾಗಲೇ ಸಭೆ ನಡೆಸಿ, ಹೊರ ಹೋದವರಿಗೆ ಮಣೆ ಹಾಕಬೇಡಿ ಎಂದು ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ.
ರಾಮನಗರದಲ್ಲಿ ಶಾಸಕ ಕೆ.ರಾಜು ನೇತೃತ್ವದಲ್ಲಿ ಜೆಡಿಎಸ್, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಜಿಲ್ಲಾಧ್ಯಕ್ಷ ಜಿಯಾವುಲ್ಲಾ ಮತ್ತು ಮರಿದೇವರು ನೇತಣತ್ವದಲ್ಲಿ ಕಾಂಗ್ರೆಸ್ ಸಭೆ ನಡೆದಿದೆ. ಮಾಗಡಿಯಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಈಗಾಗಲೇ ಹಲವು ಆಕಾಂಕ್ಷಿಗಳಿಗೆ ಜೆಡಿಎಸ್ ಬಿ ಫಾರಂ ಅಭಯ ನೀಡಿದ್ದು, ಕೆಪಿಸಿಸಿ ಸದಸ್ಯ ಎ.ಮಂಜು ಕೂಡ ಸಭೆ ನಡೆಸಿ ಕಾರ್ಯತಂತ್ರ ಹೆಣೆಯುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement