ಸಭೆ ಕರೆದು, ತೀರ್ಮಾನ ಕೈಗೊಳ್ಳಿ
ರಾಮನಗರ: ನಗರದ ಅರ್ಚಕರಹಳ್ಳಿ ಗ್ರಾಮದ ಸರ್ವೆ ನಂಬರ್ 201ರಲ್ಲಿ ನಿವೇಶನ ಹಂಚಿಕೆ ವಿಚಾರದಲ್ಲಿ ಜರೂರಾಗಿ ದಲಿತ ಮುಖಂಡರ ಸಭೆ ಕರೆದು, ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಜಿಲ್ಲಾ ಸಮಿತಿಯು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ನೀಡಿದೆ. ಈ ಸಂಬಂಧ ಸಂಘಟನೆಯ ಜಿಲ್ಲಾ ಸಂಚಾಲಕ ಪಿ. ಸೋಮಶೇಖರ್ ಹಾಗೂ ಕಾರ್ಯದರ್ಶಿ ಭೈರಲಿಂಗಯ್ಯ ನೇತೃತ್ವದ ತಂಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ವಿವಾದಿತ ಜಾಗವು ದಲಿತ ಸಮುದಾಯದವರಿಗೆ ನಿವೇಶನಗಳ ಹಂಚಿಕೆಗೆ ಮೀಸಲಾಗಿದೆ. ಈ ವಿಷಯದಲ್ಲಿ ನ್ಯಾಯಯುತ ತೀರ್ಮಾನ ಕೈಗೊಳ್ಳಬೇಕು ಎಂದರು. ಅರ್ಚಕರಹಳ್ಳಿ ದಾಖಲೆ ಸರ್ವೆ ನಂ.201ರಲ್ಲಿ 4 ಎಕರೆ 17 ಗುಂಟೆ ಸರ್ಕಾರಿ ಜಮೀನಿದೆ. ಈ ಭೂಮಿಯನ್ನು ಹಿಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿವೇಶನ ರಹಿತರಿಗೆ ನಿವೇಶನಗಳನ್ನು ವಿತರಿಸಲು ಮಂಜೂರು ಮಾಡಿರುವುದಕ್ಕೆ ದಾಖಲೆ ಪತ್ರಗಳಿವೆ ಎಂದು ನಿಯೋಗ ವಿವರಿಸಿತು. 20-30 ಅಡಿ ಅಳತೆಯ 167 ನಿವೇಶನಗಳನ್ನು ಹಂಚಿಕೆ ಮಾಡಲು ನೀಲನಕ್ಷೆ ಕೂಡ ತಯಾರಾಗಿದೆ. ಸದರಿ ಭೂಮಿಯನ್ನು ಕೆಲವರು ಅತಿಕ್ರಮಣ ಮಾಡಿ ಟೆಂಟ್ ಮತ್ತು ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದಾರೆ. ತಾವು ಖುದ್ದು ಸ್ಥಳ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.