ಇಂದು ಯುವಜನ ಶಿಬಿರ ಸಮಾರೋಪ
ದೊಡ್ಡಬಳ್ಳಾಪುರ: ಇಲ್ಲಿನ ಶ್ರೀದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ನೇತೃತ್ವದಲ್ಲಿ ತಾಲೂಕಿನ ಎಸ್.ನಾಗೇನಹಳ್ಳಿ ಗ್ರಾಮದಲ್ಲಿ ಕಳೆದ 7 ದಿನಗಳಿಂದ ನಡೆದ ವಿಶೇಷ ಯುವಜನ ಸೇವಾ ಶಿಬಿರ-2013ರ ಸಮಾರೋಪ ಸಮಾರಂಭ ಫೆ.20ರ ಬುಧವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಎಸ್‌ಡಿಯುಐಟಿ ಟ್ರಸ್ಟಿ ಜೆ.ರಾಜೇಂದ್ರ ಅಧ್ಯಕ್ಷತೆ ವಹಿಸಲಿದ್ದು, ಡಿವೈಎಸ್ಪಿ ಶ್ರೀಧರ್, ಸಮಾಜ ಕಲ್ಯಾಣಾಧಿಕಾರಿ ಅಶ್ವತ್ಥನಾರಾಯಣರೆಡ್ಡಿ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಶಿಬಿರಾಧಿಕಾರಿ ಎಂ.ಚಿಕ್ಕಣ್ಣ ವರದಿ ಮಂಡಿಸಲಿದ್ದು, ಪ್ರಾಂಶುಪಾಲ ಕೆ.ಎನ್.ಶ್ರೀನಿವಾಸನ್ ಮತ್ತಿತರರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ 7 ದಿನದ ಶಿಬಿರದ ಶ್ರಮದಾನ ಚಟುವಟಿಕೆಗಳ ಸಮಾರೋಪ ಮತ್ತು ಉತ್ತಮ ಶಿಬಿರಾರ್ಥಿ ಪ್ರಶಸ್ತಿ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇಬ್ಬರು ಪಕ್ಷೇತರರ ನಾಮಪತ್ರ ಸಲ್ಲಿಕೆ
ರಾಮನಗರ: ಪೌರ ಸಂಸ್ಥೆಗಳ ಚುನಾವಣೆಗೆ ಮಂಗಳವಾರ ಜಿಲ್ಲೆಯ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗೆ ಸ್ಪರ್ಧೆ ಬಯಸಿ ತಲಾ ಒಬ್ಬರು ಪಕ್ಷೇತರ ಅಭ್ಯರ್ಥಿ ಉಮೇದುವಾರಿಕೆ ಅರ್ಜಿ ಸಲ್ಲಿಸಿದ್ದಾರೆ.
ಕಾಲೇಜುಗಳ ವಾರ್ಷಿಕೋತ್ಸವ
ನೆಲಮಂಗಲ: ಭಾರತ ಸಂಸ್ಕೃತಿ ಮತ್ತು ಸಂಸ್ಕಾರದ ಸ್ಪರ್ಶದಿಂದ ಜೀವಂತಿಕೆಯನ್ನು ಪಡೆದಿದೆ ಎಂದು ಬಸವಣ್ಣದೇವರ ಮಠದ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮಿ ಹೇಳಿದರು. ಅವರು ಪಟ್ಟಣದ ಬಸವೇಶ್ವರ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಶ್ರೀ ಬಸವೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜುಗಳ ವಾರ್ಷಿಕೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ಶಾಸಕ ಎಂ.ವಿ.ನಾಗರಾಜ್ ಮಾತನಾಡಿ, ಸರ್ಕಾರ ವಿದ್ಯಾಭ್ಯಾಸಕ್ಕೆ ಅನುಕೂಲ ನೀಡುತ್ತಿದ್ದು ಉನ್ನತ ವ್ಯಾಸಂಗಕ್ಕೂ ಕೂಡ ಅನೇಕ ಸಾಲ ಯೋಜನೆಗಳನ್ನು ನೀಡುವುದರಿಂದ ಮಧ್ಯಮ ವರ್ಗದ ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವಲ್ಲಿ ದೃಢ ನಿರ್ಧಾರ ಕೈಗೊಳ್ಳಬೇಕು ಎಂದರು. ವಿಧಾನ ಪರಿಷತ್ ಸದಸ್ಯ ರಾಮಚಂದ್ರಗೌಡ ಮಾತನಾಡಿ, ದಾನಗಳಲೆಲ್ಲಾ ಅತ್ಯಂತ ಮಹತ್ವದ್ದು ವಿದ್ಯಾದಾನ ಎಂದರು.
ರೇಖಾ ರಾಮಚಂದ್ರನ್ ಮಾತನಾಡಿ, ವಿದ್ಯಾರ್ಥಿನಿಯರಿಗೆ ನಮ್ಮ ಸಂಸ್ಕೃತಿ, ಪರಂಪರೆಯ ಹಿನ್ನೆಲೆಯಲ್ಲಿ ಸಾಮಾಜಿಕ ಕಳಕಳಿಯ ಹಲವು ಮುಖಗಳನ್ನು ವಿದ್ಯಾರ್ಥಿ ಜೀವನಕ್ಕೆ ಅನ್ವಯಿಸುವಂತೆ ತಿಳಿಸಿದರು. ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹದೇವಯ್ಯ, ರೇಖಾ, ಉಪನ್ಯಾಸಕಿ ಅಕ್ಕಮಹಾದೇವಿ, ಎಂ.ಬಿ. ಮಹದೇವಯ್ಯ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.