ಕಾರ್ಮಿಕ ಸಂಘಟನೆಗಳಿಂದ ಬೈಕ್ ರ್ಯಾಲಿ
ದೊಡ್ಡಬಳ್ಳಾಪುರ: ದೇಶವ್ಯಾಪಿ ಫೆ.20 ಮತ್ತು 21ರಂದು ನಡೆಯುತ್ತಿರುವ ಕಾರ್ಮಿಕರ ಮುಷ್ಕರದ ಹಿನ್ನಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಈ ಹಿನ್ನಲೆಯಲ್ಲಿ ಮಂಗಳವಾರ ನಗರದಲ್ಲಿ ಕಾರ್ಮಿಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬೈಕ್ ರ್ಯಾಲಿ ನಡೆಸಿ ಬಂದ್ ಔಚಿತ್ಯವನ್ನು ನಾಗರಿಕರಿಗೆ ಮನವರಿಕೆ ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಮುಖಂಡರು, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಪೂರಕವಾಗಿ ದುಡಿಯುವ ವರ್ಗಕ್ಕೆ ಕನಿಷ್ಠ ವೇತನ ಜಾರಿಗೊಳಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.
ಅಸಂಘಟಿತ ವಲಯದ ಕಾರ್ಮಿಕರನ್ನೂ ಸೇರಿಸಿ ಎಲ್ಲ ಬಗೆಯ ದೈಹಿಕ ಶ್ರಮ ಆಧಾರಿತ ಕಾರ್ಮಿಕರಿಗೆ ಮಾಸಿಕ ಕನಿಷ್ಠ 10 ಸಾವಿರ ವೇತನ ಜಾರಿಗೊಳಿಸಬೇಕು.
ಬೆಲೆ ಏರಿಕೆ, ಭ್ರಷ್ಟಾಚಾರ, ದುರಾಡಳಿತದ ಮೂಲಕ ಜನ ವಿರೋಧಿಯಾಗಿರುವ ಸರ್ಕಾರಗಳಿಗೆ ಪರ್ಯಾಯವಾಗಿ ಜನಪರ ಸರ್ಕಾರದ ನೀತಿಗಳಿಗಾಗಿ ಎಲ್ಲರೂ ಒತ್ತಾಯಿಸಬೇಕಾಗಿದೆ. ತಾಲೂಕಿನಲ್ಲಿ ಕಾರ್ಮಿಕರು ಸಂಘಟಿತರಾಗಿ ಮುಷ್ಕರವನ್ನು ಬೆಂಬಲಿಸಬೇಕಿದೆ.
ಈ ನಿಟ್ಟಿನಲ್ಲಿ ಈ ಜನಜಾಗೃತಿ ಸಭೆ ನಡೆಯುತ್ತಿದೆ. ಭವಿಷ್ಯ ನಿಧಿ, ಬೋನಸ್ ನೀಡುವ ಹಂತದಲ್ಲಿ ಸೂಕ್ತ ಕಾಯಿದೆಗಳನ್ನು ಸರ್ಕಾರ ಜಾರಿಗೊಳಿಸಬೇಕು. ಖಾಸಗಿ ವಲಯದಲ್ಲೂ ಪಿಂಚಣಿ, ಮೀಸಲಾತಿಗೆ ಚಿಂತನೆ ನಡೆಯಬೇಕಿದೆ. ಸಾಮಾಜಿಕ ಸುರಕ್ಷತಾ ನಿಧಿ ಸ್ಥಾಪನೆಗೆ ಪೂರಕವಾಗಿ ಸಂಪನ್ಮೂಲಗಳನ್ನು ಒದಗಿಸುವ ಕೆಲಸವೂ ಅಗಬೇಕು ಎಂದು ಆಗ್ರಹಿಸಿದರು.