ಪಶ್ಚಿಮ ಘಟ್ಟಗಳ ನೀರನ್ನು ಶೀಘ್ರ ತರಬೇಕಿದೆ: ಸಿ. ಪುಟ್ಟಸ್ವಾಮಿ ಕರೆ
ಚನ್ನಪಟ್ಟಣ: ನೀರಾವರಿ ಸಮಸ್ಯೆಯಿಂದ ಕಂಗಾಲಾಗಿರುವ ಬಯಲು ಸೀಮೆ ಪ್ರದೇಶಕ್ಕೆ ಪರಮಶಿವಯ್ಯ ವರದಿಯಲ್ಲಿ ತಿಳಿಸಿರುವಂತೆ ಪಶ್ಚಿಮ ಘಟ್ಟಗಳ ನೀರನ್ನು ನಮ್ಮ ಭಾಗಕ್ಕೆ ತರಬೇಕಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಸಂಚಾಲಕ ಸಿ.ಪುಟ್ಟಸ್ವಾಮಿ ತಿಳಿಸಿದರು.
ಶಾಶ್ವತ ನೀರಾವರಿ ಸಮಿತಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮತ್ತೆ ಬರ ಬೇಡ ಸಾಕ್ಷ್ಯ ಚಿತ್ರದ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಯಲು ಸೀಮೆಯ ಜನತೆಯ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಈಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗ ಬೇಕೆಂದು ತಿಳಿಸಿದರು. ಸಾಕ್ಷ್ಯಚಿತ್ರದ ಮೂಲಕ ಬಯಲು ಸೀಮೆಯ ಶಾಶ್ವತ ನೀರಾವರಿ ಯೋಜನೆಯ ಬಗ್ಗೆ ಮನನ ಮಾಡಿಸಲು ಮುಂದಾಗಿರುವ ಡಾ. ಮಧು ಸೀತಪ್ಪ ಕಾರ್ಯ ಶ್ಲಾಘನೀಯವಾಗಿದೆ. ಅವರ ಕಾರ್ಯ ಎಲ್ಲರಿಗೂ ತಿಳಿಸುವ ಪ್ರಯತ್ನ ಮಾಡ ಬೇಕಿದೆ ಎಂದರು.
ಸುಮಾರು 90ನಿಮಿಷಗಳ ಕಾಲ ಇರುವ ಈ ಸಾಕ್ಷ್ಯಚಿತ್ರವನ್ನು ಅತ್ಯಂತ ಶ್ರಮವಹಿಸಿ ಮಧು ಅವರು ರೂಪಿಸಿದ್ದು, ಈ ಪ್ರಯೋಗ ನಿಜಕ್ಕೂ ಮೆಚ್ಚುವಂಥದ್ದು. ಸಾಕ್ಷ್ಯಚಿತ್ರದಲ್ಲಿ ವರದಿಯ ಸಾಧಕ ಬಾಧಕಗಳ ಬಗ್ಗೆ ಸಂಪುರ್ಣವಾಗಿ ವಿವರಿಸಲಾಗಿದೆ. ಈ ಪ್ರಯತ್ನ ಯಶಸ್ವಿಯಾಗಿ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂಬ ವಿಶ್ವಾಸ ತಮಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ. ಶಂಕರಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ನಾವೆಲ್ಲ ನೆಮ್ಮದಿಯ ಬದುಕು ರೂಪಿಸಿ ಕೊಳ್ಳಬೇಕಾದರೆ ಶಾಶ್ವತ ನೀರಾವರಿ ಯೋಜನೆಯ ಅನುಷ್ಠಾನ ಅಗತ್ಯವಾಗಿದೆ ಎಂದು ತಿಳಿಸಿದ ಅವರು ವಿದ್ಯಾರ್ಥಿಗಳ ಜ್ಞಾನ ವಿಕಾಸಕ್ಕೆ ಇಂತಹ ಸಾಕ್ಷ್ಯ ಚಿತ್ರಗಳು ಸಹಕಾರಿಯಾಗಲಿವೆ ಎಂದರು.
ಸಾಕ್ಷ್ಯಚಿತ್ರವನ್ನು ತಾಲೂಕಿನ ವಿವಿಧ ಶಾಲಾ-ಕಾಲೇಜುಗಳಲ್ಲಿ ಪ್ರದರ್ಶಿಸುತ್ತಿರುವ ರೈತಸಂಘದ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳಿಗೆ ಇಂಥಹ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅರ್ಥಶಾಸ್ತ್ರ ಉಪನ್ಯಾಸಕ ಪ್ರೊ. ಕೆ.ಎಂ. ಮಾಯಿಗೇಗೌಡ, ಶಾಮಲಾ ಹಾಗೂ ಕಾಲೇಜಿನ ಉಪನ್ಯಾಸಕವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.