ಬಂದ್ ಬೆಂಬಲಿಸಲು ಸಿಐಟಿಯು ಮನವಿ
ಆನೇಕಲ್: ಫೆ. 20 ಮತ್ತು 21 ರಂದು ನಡೆಯಲಿರುವ ಭಾರತ ಸಾರ್ವತ್ರಿಕ ಮುಷ್ಕರವನ್ನು ಎಲ್ಲಾ ಕಾರ್ಮಿಕ ಸಂಘಟನೆಗಳು ಬೆಂಬಲಿಸುವಂತೆ ಸಿಐಟಿಯು ರಾಜ್ಯ ಉಪಾಧ್ಯಕ್ಷೆ ಲೀಲಾವತಿ ಕೋರಿದ್ದಾರೆ.
ಅವರು ಸಿಐಟಿಯು ಆಯೋಜಿಸಿದ್ದ ಮೆರವಣಿಗೆಯಲ್ಲಿ ಭಾಗವಹಿಸಿ ನಂತರ ಪಟ್ಟಣದ ತಾಲ್ಲೂಕು ಕಚೇರಿಯ ಮುಂದೆ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಂದಾಗಿ ಆಹಾರ ಪದಾರ್ಥಗಳ ಬೆಲೆ ನಿರಂತರ ಹೆಚ್ಚಾಗುತ್ತಿದ್ದು ಜನ ಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ತೆರಿಗೆ ಹಣವನ್ನು ದುಂದು ವೆಚ್ಚ ಮಾಡುತ್ತಿದೆ. ಇದನ್ನು ವಿರೋಧಿಸಿ ಜನ ಸಾಮಾನ್ಯರಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿ ದೇಶದಲ್ಲಿ ಮೊದಲ ಬಾರಿಗೆ ಎರಡು ದಿನಗಳ ಕಾಲ (48 ಗಂಟೆಗಳು) ಮುಷ್ಕರಕ್ಕೆ ಕರೆ ನೀಡಲಾಗಿದೆ. ಎಲ್ಲಾ ಕಾರ್ಮಿಕ ಸಂಘಟನೆಗಳು, ರೈತರು ಮತ್ತು ಯುವ ಜನತೆ ಭಾಗವಹಿಸಬೇಕೆಂದು ಮನವಿ ಮಾಡಿದರು. ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಡಿ.ಮಹದೇಶ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಜನ ಸಾಮಾನ್ಯರ ಜೀವನದ ಬಗ್ಗೆ ಕಾಳಜಿಯೆ ಇಲ್ಲ. ಇವರುಗಳ ವಿರುದ್ಧ ದೇಶದ ಎಲ್ಲಾ ಕಾರ್ಮಿಕರು ಜನರಲ್ಲಿ ಜಾಗೃತಿ ಮೂಡಿಸಲು ತಾಲ್ಲೂಕಿನಾದ್ಯಂತ ಸಭೆಗಳು, ಬೈಕ್ ರ್ಯಾಲಿ, ಪಂಜಿನ ಮೆರವಣಿಗೆಗಳನ್ನು ನಡೆಸಲಾಗುವುದು ಎಂದರು. ತಾಲೂಕಿನಾದ್ಯಂತ ದೊಮ್ಮಸಂದ್ರ, ಜಿಗಣಿ, ಅತ್ತಿಬೆಲೆ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಗಳಲ್ಲಿ ಮುಷ್ಕರ ನಡೆಸಲಾಗುವುದು ಎಂದರು. ಸಾರಿಗೆ, ವ್ಯಾಪಾರ, ಕಾರ್ಖಾನೆ, ಶಾಲಾ ಕಾಲೇಜು, ಬ್ಯಾಂಕ್ ಮೊದಲಾದ ಕಚೇರಿಗಳು ಬಂದ್ ಆಗಲಿದ್ದು ನಾಗರಿಕರು ಭಾಗವಹಿಸಬೇಕಾಗಿ ಮನವಿ ಮಾಡಿದರು.
ಬಿ.ಎನ್. ಮಂಜುನಾಥ್, ಅಶೋಕ್ಕುಮಾರ್, ಬಾಲರಾಜ್, ರಾಮಕೃಷ್ಣ, ಲಕ್ಷ್ಮಿ ಇತರರು ಇದ್ದರು.