ಚುನಾವಣೆ ಭರಾಟೆಯಲ್ಲಿ ಪುರಪಿತೃ ಮರೆತ ಆಡಳಿತಶಾಹಿ
- ಕೆ.ಆರ್. ರವಿಕಿರಣ್
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಸಂಪೂರ್ಣ ಬೆಳವಣಿಗೆ ಮತ್ತು ಅಭಿವೃದ್ಧಿ ಸ್ಪಷ್ಟ ದೃಷ್ಠಿಕೋನದಲ್ಲಿ ಜೀವಮಾನವಿಡೀ ತನ್ನೂರಿಗಾಗಿ, ತನ್ನವರ ಅಭ್ಯುದಯಕ್ಕಾಗಿ ಶ್ರಮಿಸಿದ ಲೋಕ ಸೇವಾನಿರತ ಡಿ.ಕೊಂಗಾಡಿಯಪ್ಪ ಅವರ 152ನೇ ಜನ್ಮದಿನಾಚರಣೆ ಇಂದು.
ಊರಿಗಾಗಿ ಸಮರ್ಪಣಾ ಮನೋಭಾವದಿಂದ ಅರ್ಪಿಸಿಕೊಂಡ ವ್ಯಕ್ತಿ ಸ್ಮರಣೆ ಎಲ್ಲರ ಕರ್ತವ್ಯ. ಆದರೆ, ನಗರಸಭೆ ಚುನಾವಣೆ ಭರಾಟೆಯಲ್ಲಿ ಪುರಪಿತೃವಿನ ಜನ್ಮದಿನೋತ್ಸವ ಮರೆತಿರುವುದು ಮಾತ್ರ ಇಲ್ಲಿನ ಆಡಳಿತಶಾಹಿಯ ದೊಡ್ಡಸ್ಥಿಕೆ.
ಭರವಸೆ ಹಾಗೇ ಉಳಿದಿದೆ: ದೊಡ್ಡಬಳ್ಳಾಪುರ-ಯಲಹಂಕ ರಸ್ತೆಗೆ ಕೊಂಗಾಡಿಯಪ್ಪನವರ ಹೆಸರನ್ನು ನಾಮಕರಣ ಮಾಡಲಾಗುವುದು. ಈ ಬಗ್ಗೆ ಸದನದಲ್ಲಿ ಚರ್ಚಿಸಿ ಕೂಡಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಥಳೀಯ ಶಾಸಕ ಜೆ.ನರಸಿಂಹಸ್ವಾಮಿ ಕೊಂಗಾಡಿಯಪ್ಪ ಅವರ 150ನೇ ಜನ್ಮದಿನೋತ್ಸವ ವೇಳೆ ಕೊಟ್ಟ ಭರವಸೆ ಹಾಗೇ ಉಳಿದಿದೆ.
ಕೊಂಗಾಡಿಯಪ್ಪ ಒಬ್ಬ ಸಾಮಾನ್ಯ ಶಾಲಾ ಮಾಸ್ತರರಾಗಿ ಒಂದು ಇಡೀ ಪೀಳಿಗೆಯನ್ನು ಪ್ರಭಾವಿಸಿದವರು. ಸ್ವಾರ್ಥ ಏಣಿಸದೆ, ಊರಿನವರ ಹಿತಕ್ಕಾಗಿ ದುಡಿದ ಮಹಾಚೇತನ. 1861ರ ಫೆ.22ರಂದು ಕಡು ಬಡತನದ ಕುಟುಂಬವೊಂದರಲ್ಲಿ ಜನಿಸಿದ ಕೊಂಗಾಡಿಯಪ್ಪ , ಲೋಯರ್ ಸೆಕೆಂಡರಿ ವಿದ್ಯಾಭ್ಯಾಸ ಮಾಡಿ ಜೀವನೋಪಾಯಕ್ಕಾಗಿ 1877ರಲ್ಲಿ ಅಂಗ್ಲೋ ವರ್ನಾಕ್ಯುಲರ್ ಶಾಲೆಗೆ ಉಪಾಧ್ಯಾಯರಾಗಿ ಸೇರಿದರು. ಅಲ್ಲಿಂದ 40 ವರ್ಷಗಳ ಕಾಲ ಅಧ್ಯಾಪಕರಾಗಿಯೇ ಕಳೆದ ಅವರು 1917ರಲ್ಲಿ ನಿವೃತ್ತರಾದರು.
ವಿದ್ಯಾದಾನಿ-ಅನ್ನದಾನಿ: ಸಾಕ್ಷರತೆ ಮತ್ತು ಸ್ವಚ್ಛತೆ ಕುರಿತು ಹರಿಜನ ಕೇರಿಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಗಾಂಧಿ ಚಿಂತನೆಯನ್ನು ದೊಡ್ಡಬಳ್ಳಾಪುರದಲ್ಲಿ ಆರಂಭಿಸಿದ್ದರು. ಓದುವ ಉತ್ಸಾಹವುಳ್ಳ ಯಾವೊಬ್ಬ ವಿದ್ಯಾರ್ಥಿಯೂ ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಹಲವು ಕ್ರಮ ಕೈಗೊಂಡವರು.
ಉಳ್ಳವರ ಬಳಿ ಬೇಡಿ ವಿದ್ಯಾರ್ಥಿಗಳಿಗೆ ಅನ್ನ ನೀಡಿದ ಅನ್ನದಾನಿ. ಕೊಂಗಾಡಿಯಪ್ಪ ಅವರ ಈ ವಾರಾನ್ನದ ಶಿಷ್ಯರಲ್ಲಿ ಶಿಕ್ಷಣತಜ್ಞ ದಿ. ಡಾ.ಎಚ್.ನರಸಿಂಹಯ್ಯ ಕೂಡ ಒಬ್ಬರು. ಅಂತಹ ನೂರಾರು ಶಿಷ್ಯ ಸಮೂಹಕ್ಕೆ ಅವರು ಪ್ರೀತಿಯ ಕಾಕಣ್ಣ ಮೇಷ್ಟ್ರು.
ಅವರ 37 ವರ್ಷಗಳ ಸುದೀರ್ಘ ದಿನಚರಿ ಒಂದು ಅಪೂರ್ವ ದಾಖಲೆ. ಒಬ್ಬ ವ್ಯಕ್ತಿ ತನ್ನ ನಿರ್ದಿಷ್ಟ ಕಾಲಮಾನದಲ್ಲಿ ಏನೆಲ್ಲ ಯೋಚಿಸಬಹುದು, ಹೇಗೆ ಕಾರ್ಯರೂಪಕ್ಕೆ ತರಬಹುದು ಎಂಬುದಕ್ಕೆ ಅದು ದಾರಿದೀಪ. ಕೊಂಗಾಡಿಯಪ್ಪ ಅವರ ಬದುಕಿನ ಮಹತ್ವವನ್ನು ಅರಿತಿದ್ದ ಡಿವಿಜಿ ಅವರು ಈ ದಿನಚರಿಗಳನ್ನು ಗೋಖಲೆ ಸಾರ್ವಜನಿಕ ಕೇಂದ್ರದಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಕೊಂಗಾಡಿಯಪ್ಪ ಕಾಲೇಜು ಗ್ರಂಥಾಲಯದಲ್ಲೂ ಕೆಲ ದಾಖಲೆಗಳಿವೆ.
ಸ್ಮರಣೀಯ ವ್ಯಕ್ತಿತ್ವ: ಕೊಂಗಾಡಿಯಪ್ಪ ಅವರದು ಸ್ಮರಣೀಯ ವ್ಯಕ್ತಿತ್ವ. ಅವರ ಅನುಪಮಸೇವೆಗೆ 1931ರಲ್ಲಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಲೋಕ ಸೇವಾನಿರತ ಬಿರುದನ್ನು ಪಡೆದ ಅವರ ಹೆಸರಿನಲ್ಲಿ ಇಂದು ಬೃಹತ್ ಶಿಕ್ಷಣ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
ದೊಡ್ಡಬಳ್ಳಾಪುರ ಪುರಸಭೆಯ ಮೊದಲ ಅಧ್ಯಕ್ಷರಾಗಿದ್ದ ಅವರ ಹೆಸರನ್ನು ಬಸ್ನಿಲ್ದಾಣ ಮತ್ತು ಮುಖ್ಯರಸ್ತೆಗೆ ನಾಮಕರಣ ಮಾಡಲಾಗಿದೆ. ಅವರ ಸಮಾಧಿ ಸ್ಥಳ ಅಭಿವೃದ್ಧಿಪಡಿಸಲು ಸ್ಥಳೀಯ ಆಡಳಿತ ಕೆಲ ಸಂಘಟನೆಗಳೊಂದಿಗೆ ಎಚ್ಚೆತ್ತುಕೊಂಡಿದೆ. ಮಾರುಕಟ್ಟೆ ಶಾಲೆ ಮುಂಭಾಗ ಕೊಂಗಾಡಿಯಪ್ಪ ಅವರ ಪುತ್ಥಳಿ ಸ್ಥಾಪಿಸಲಾಗಿದೆ. ಆದಾಗ್ಯೂ ಕೊಂಗಾಡಿಯಪ್ಪ ಅವರ ಹೆಸರನ್ನು ಕೇವಲ ಪ್ರಚಾರಕ್ಕೆ ಬಳಸಿಕೊಳ್ಳುವ ಪ್ರಯತ್ನಗಳು ನಡೆದಿವೆ.
ಇಂದು ವಿವಿಧ ಕಾರ್ಯಕ್ರಮ
ದೊಡ್ಡಬಳ್ಳಾಪುರ: ಪುರಪಿತೃ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರ 152ನೇ ಜನ್ಮದಿನಾಚರಣೆ ಅಂಗವಾಗಿ ಅವರ ಸಮಾಧಿ ಸ್ಥಳದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಫೆ.22ರ ಬೆಳಗ್ಗೆ 9.30ಕ್ಕೆ ನಡೆಯಲಿದೆ. ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿ ಮತ್ತಿತರ ಸಂಘಟನೆಗಳು ವಿವಿಧ ಕಾರ್ಯಕ್ರಮ ಆಯೋಜಿಸಿವೆ.
ಪುತ್ಥಳಿ ಬಳಿ ಕಾರ್ಯಕ್ರಮ: ಕೊಂಗಾಡಿಯಪ್ಪ ಮುಖ್ಯರಸ್ತೆಯ ಮಾರುಕಟ್ಟೆ ಚೌಕದ ಮುಂಭಾಗ ಇರುವ ಕೊಂಗಾಡಿಯಪ್ಪ ಪುತ್ಥಳಿ ಮುಂದೆ ದೇವಾಂಗ ಮಂಡಲಿ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಬೆಳಗ್ಗೆ 8.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಡಾ.ಎ.ಒ.ಆವಲಮೂರ್ತಿ, ದೇವಾಂಗ ಮಂಡಲಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್, ಕಾರ್ಯದರ್ಶಿ ಎ.ಎಸ್.ಕೇಶವ, ಕಸಾಪ ತಾ.ಅಧ್ಯಕ್ಷ ರವಿಕಿರಣ್ ಮತ್ತಿತರರು ಭಾಗವಹಿಸಲಿದ್ದಾರೆ.
ಕಾಲೇಜಿನಲ್ಲಿ ಕಾರ್ಯಕ್ರಮ: ಕೊಂಗಾಡಿಯಪ್ಪ ಕಾಲೇಜು ಆವರಣದಲ್ಲಿರುವ ಕೊಂಗಾಡಿಯಪ್ಪ ಪುತ್ಥಳಿಗೆ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಜನ್ಮದಿನಾಚರಣೆ ಸಂಭ್ರಮ ಗುರುವಾರ ನಡೆಯಲಿದೆ. ಕಾಲೇಜು ಆಡಳಿತ ಮಂಡಲಿ ಪದಾಧಿಕಾರಿಗಳು, ಬೋಧಕರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.