ವಾಹನದಿಂದ ಜಿಗಿದು ವಿದ್ಯಾರ್ಥಿ ಸಾವು
ರಾಮನಗರ: ಚಲಿಸುತ್ತಿದ್ದ ಶಾಲಾ ವಾಹನದಿಂದ ಹೊರಕ್ಕೆ ಜಿಗಿದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ತಾಲೂಕಿನ ಮಾಯಗಾನಹಳ್ಳಿ ಬಳಿ ಗುರುವಾರ ಸಂಭವಿಸಿದೆ. ಮಾಯಗಾನಹಳ್ಳಿಯ ಪುಟ್ಟಲಿಂಗಯ್ಯರ ಪುತ್ರ ಫಾಲಾಕ್ಷ (10) ಮೃತ ಪಟ್ಟ ಬಾಲಕ. ಈತ ಸುಗ್ಗನಹಳ್ಳಿಯ ವಿವೇಕಾನಂದ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಆತನ ಶಾಲೆಗೆ ರಜೆ ಇದ್ದು, ಗ್ರಾಮಕ್ಕೆ ಬಂದಿದ್ದ ಬೇರೆ ಶಾಲೆಯ ವಾಹನವೇರಿ ಆಟವಾಡುತ್ತಿದ್ದನು.
ಚಾಲಕನು ವಾಹನ ಚಾಲನೆ ಮಾಡಿದಾಗ ಗಾಬರಿಗೊಂಡ ಬಾಲಕ ಹೊರಕ್ಕೆ ಜಿಗಿದನು. ಆ ವಾಹನದ ಹಿಂಬದಿಯ ಚಕ್ರಗಳು ಫಾಲಾಕ್ಷನ ತಲೆ ಮೇಲೆ ಹರಿದು, ಆತ ಸ್ಥಳದಲ್ಲೇ ಸಾವನ್ನಪಿದ ಎಂದು ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.
ವ್ಯಕ್ತಿ ಶವ ಪತ್ತೆ
ಹೊಸಕೋಟೆ: ತಾಲೂಕಿನ ಚಿಕ್ಕಹುಲ್ಲೂರು ಹತ್ತಿರದ ನಿರ್ಜನ ಪ್ರದೇಶದಲ್ಲಿ ಕೊಲೆಯಾಗಿರುವ ವ್ಯಕ್ತಿಯ ಶವ ಪತ್ತೆಯಾಗಿದೆ.
ಈ ವ್ಯಕ್ತಿಯು ಬೆಂಗಳೂರಿನ ಮೈಕೋ ಬಡಾವಣೆಯ ಹೊಂಗಸಂದ್ರದ ವಾಸಿ ಮನೀಷ್ನಾಯರ್ (23) ಎಂದು ಗುರುತಿಸಲಾಗಿದೆ. 3 ದಿನಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಮನೆಯಿಂದ ತೆರಳಿದ್ದು ಹಿಂದಿರುಗಿರಲಿಲ್ಲ. ಈತ ಬಿಟಿಎಂ ಬಡಾವಣೆಯ ತನ್ನ ಪತ್ನಿ ನಡೆಸುತ್ತಿದ್ದ ನರ್ಸಿಂಗ್ ಹೊಂನಲ್ಲಿ ಕೆಲಸ ಮಾಡತ್ತಿದ್ದ. ಈ ಸಂಬಂಧ ಪತ್ನಿ ಸುಧಾ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪತಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.