ಅಲೆದಾಡುತ್ತಿರುವ ಡಿಎಚ್ಒ
ಬಾಗಲಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ವರ್ಗವಾಗಿ ಬಂದಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಡಿ. ಕಿತ್ತೂರ ಕುರ್ಚಿ ಸಿಗದೆ ಕಳೆದ ಆರು ದಿನಗಳಿಂದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸ್ಥಳೀಯ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ಅವರ ಮನೆಗಳಿಗೆ ಅಲೆದಾಡುತ್ತ ಸೇವೆಗಾಗಿ ಗೋಗರೆಯುತ್ತಿದ್ದಾರೆ.
ಇವರನ್ನು ಸೇವೆಗೆ ಹಾಜರು ಮಾಡಿಕೊಳ್ಳಬೇಕಿರುವ ಜಿಪಂ ಸಿಇಒ ಎಸ್.ಜಿ. ಪಾಟೀಲ್ ತಮ್ಮ ಪುತ್ರನ ಮದುವೆಯಲ್ಲಿ ಬ್ಯೂಸಿಯಾಗಿದ್ದಾರೆ. ಇದರಿಂದ ಡಾ.ಕಿತ್ತೂರ ಮೂಲಸ್ಥಳದಿಂದ ಬಿಡುಗಡೆಯಾಗಿ ಬಂದು, ಇಲ್ಲಿ ಕಂಡ ಕಂಡವರಿಗೆ ಕೈ ಮುಗಿಯಬೇಕಾಗಿರುವುದು ಜಿಲ್ಲೆಯ ಸರ್ಕಾರಿ ನೌಕರರಲ್ಲಿ ಆಕ್ರೋಶ ಹುಟ್ಟಿಸಿದೆ.
ಡಾ.ಕಿತ್ತೂರ ವರ್ಗವಾಗಿ ಇಲ್ಲಿಗೆ ಬಂದಾಗ ಸಿಇಒ ಪಾಟೀಲ್ ಚುನಾವಣಾ ನೀತಿ ಸಂಹಿತೆ ನೆಪ ಹೇಳಿ ಹಾಜರು ಮಾಡಿಕೊಳ್ಳಲಿಲ್ಲ. ಮೇಲಾಗಿ ಆಯೋಗಕ್ಕೆ ಪತ್ರ ಬರೆದು ಸ್ಪಷ್ಟನೆ ಕೇಳಿದ್ದರು. ಆಯೋಗ ಶನಿವಾರ ತನ್ನ ಉತ್ತರ ನೀಡಿ- ಡಾ.ಕಿತ್ತೂರು ಸೇವೆಗೆ ಹಾಜರಾಗಲು ಸಂಹಿತೆಯ ಅಡ್ಡಿ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಉದ್ದೇಶಪೂರ್ವಕವಾಗಿಯೇ ಡಾ.ಕಿತ್ತೂರ ಸೇವೆಗೆ ಅಡ್ಡಿ ಪಡಿಸಿದ ಜಿಪಂ ಸಿಇಒ ಈಗ ಆಯೋಗ ಸ್ಪಷ್ಟನೆ ನೀಡಿದಾಗ್ಯೂ ಹಾಜರು ಮಾಡಿಕೊಳ್ಳುವ ನಿರ್ದೇಶನವನ್ನು ತಮ್ಮ ಹಿರಿಯ ಅಧಿಕಾರಿಗಳಿಗೆ ನೀಡದೇ ರಜೆ ಮೇಲೆ ತೆರಳಿರುವುದು ಜಿಲ್ಲೆಯ ಇನ್ನುಳಿದ ನೌಕಕರರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತ ಡಾ.ಕಿತ್ತೂರ ಅವರನ್ನು ಸೇವೆಗೆ ಹಾಜರು ಮಾಡಿಕೊಳ್ಳದೇ ಅತ್ತ ಹಿಂದಿನ ಡಿಎಚ್ಒ ಡಾ.ಎಸ್.ಗುಂಡಪ್ಪ ಅವರನ್ನು ಸ್ಥಳದಲ್ಲಿಯೇ ಉಳಿಸಿಕೊಳ್ಳುವ ತೆರೆಯ ಮರೆಯ ಸಂಚು ನಡೆಸುತ್ತಿದ್ದಾರೆ.
ಬಾಯಿ ಮಾತಿನ ಭರವಸೆ: ತಮಗೆ ಬಂದಿರುವ ಸ್ಥಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ಥಳೀಯ ಶಾಸಕರಿಗೆ ಹೇಳಿಕೊಂಡಿದ್ದರೂ ಬಾಯಿ ಮಾತಿನ ಭರವಸೆ ಸಿಕ್ಕಿದೆ. ಇವರನ್ನು ಹಾಜರು ಮಾಡಿಕೊಳ್ಳಲೇಬೇಕೆಂದು ಜಿಪಂ ಸಿಇಒಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿಲ್ಲ ಎನ್ನಲಾಗಿದ್ದು, ಹಾಗಾಗಿ ಡಾ.ಕಿತ್ತೂರ ಅವರ ಅಲೆದಾಟ ಸೋಮವಾರದವರೆಗೂ ಮುಂದುವರಿಯುವ ಸಾಧ್ಯತೆ ಇದೆ.
ಅಷ್ಟರೊಳಗೆ ಮುಖ್ಯಮಂತ್ರಿಗಳ ವಿಶೇಷ ಮುತುವರ್ಜಿಯಿಂದ ಇವರ ವರ್ಗಾವಣೆ ಆದೇಶವೇ ಬದಲಾಗುವ ಸಾಧ್ಯತೆಗಳೂ ಇವೆ. ಈ ಮಧ್ಯ ಚುನಾವಣಾ ಆಯೋಗದ ಸ್ಪಷ್ಟನೆ ಗಮನಿಸಿದ ಡಿಸಿ ಕುಂಜಪ್ಪ, ವರ್ಗಾವಣೆಯಾಗಿಯೂ ಡಾ.ಕಿತ್ತೂರ ಅವರಿಗೆ ಕುರ್ಚಿ ಬಿಟ್ಟುಕೊಡದ ಡಾ.ಗುಂಡಪ್ಪ ಅವರಿಗೆ ತಕ್ಷಣ ಸ್ಥಾನ ತೆರವು ಮಾಡಲು ಸೂಚಿಸಿದ್ದಾರೆ. ಆದರೆ, ಇಲ್ಲಿಯೇ ಉಳಿಯುವ ಆಸೆ, ಭರವಸೆ ಹೊಂದಿರುವ ಡಾ.ಗುಂಡಪ್ಪ ಇದ್ಯಾವುದಕ್ಕೂ ಸೊಪ್ಪುಹಾಕಿಲ್ಲ.