ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಐದು ವರ್ಷದ ದರ್ಬಾರ್ ಅಂತೂ ಅಂತ್ಯ

Mainashree
Updated On : 24 Feb 2013, 12:57 pm

ಮತ್ತೀಕೆರೆ ಜಯರಾಮ್
ರಾಮನಗರ: ಜಿಲ್ಲೆಯ ನಾಲ್ಕು ಪೌರ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳ ಐದು ವರ್ಷದ ದರ್ಬಾರ್ ಅಂತೂ ಇಂತು ಇವತ್ತಿಗೆ ಅಂತ್ಯವಾಗಿದೆ. ಬೆಟ್ಟದಷ್ಟು ಭರವಸೆಗಳನ್ನು ನೀಡಿ ಗೆದ್ದು ಹೋಗಿದ್ದ ಪುರಪಿತೃಗಳಿಂದ ಅಭಿವೃದ್ಧಿ ಮರೀಚಿಕೆಯಾಗಿದೆ. ಅಭಿವೃದ್ಧಿ ಗೆರೆ ಮೂಡಿಸುವಲ್ಲಿ ವಿಫಲರಾಗಿರುವ ಹಾಲಿ ಜನಪ್ರತಿನಿಧಿಗಳು ಶನಿವಾರದಿಂದ ಮಾಜಿ ಆಗಿದ್ದಾರೆ.
ರಾಮನಗರ ಜಿಲ್ಲೆ ರಚನೆ ಬಳಿಕ ರಾಮನಗರ, ಚನ್ನಪಟ್ಟಣ ನಗರಸಭೆಗಳು ಮತ್ತು ಕನಕಪುರ, ಮಾಗಡಿ ಪುರಸಭೆಗಳು ಕಂಡ ಮೊದಲ ಚುನಾಯಿತ ಆಡಳಿತ ಮಂಡಳಿ ಇವಾಗಿದ್ದವು. ಆಯ್ಕೆಯಾದ ಪ್ರತಿನಿಧಿಗಳಲ್ಲಿ ಹಲವರ ಪಕ್ಷಾಂತರ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರಾಡಳಿತದಿಂದ ಜನತೆಯನ್ನು ರೋಸಿ ಹೋಗುವಂತೆ ಮಾಡಿ, ಅಭಿವೃದ್ಧಿಯ ಕುರುಹು ಬಿಟ್ಟಿಲ್ಲ.  
ಮುಗಿದ ಕರಾಳ ಅಧ್ಯಾಯ: ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದ ಪೌರ ಸಂಸ್ಥೆಗಳ 5 ವರ್ಷದ ಆಡಳಿತದ ಕರಾಳ ಅಧ್ಯಾಯ ಮುಗಿಯಿತೆಂದು ಜನತೆ ನಿಟ್ಟುಸಿರು ಬಿಡಬೇಕೆನ್ನುವಷ್ಟರಲ್ಲಿ ಮತ್ತೊಂದು ಚುನಾವಣೆ ಬಂದಿದೆ. ಮೀಸಲು ಪುನರಾವರ್ತನೆಯಿಂದ ಅನೇಕ ಹಳೆಯ ಮುಖಗಳು ಮತ್ತೆ ಎದುರಾಗುತ್ತಿವೆ. ಹಳಬರಲ್ಲಿ ಕೆಲವರು ಜನಪರ ಕಾಳಜಿಯುಳ್ಳವರಿದ್ದು, ಒಂದಷ್ಟು ಕೆಲಸ ಮಾಡಿದ್ದಾರೆ.
ರಾಜ್ಯ ಸರ್ಕಾರವು ಸಾಕಷ್ಟು ತಾಲೂಕು ಮತ್ತು ಜಿಲ್ಲಾ ಕೇಂದ್ರಗಳ ಅಭಿವೃದ್ಧಿಗೆ ಕೋಟಿಗಟ್ಟಲೆ ಅನುದಾನದ ಹೊಳೆ ಹರಿಸಿದೆ. ಇಲ್ಲಿನ ಪ್ರತಿನಿಧಿಗಳು ಅನುದಾನಕ್ಕಾಗಿ ಸಂಘಟಿತ ಪ್ರಯತ್ನ ನಡೆಸಿಲ್ಲವೋ ಅಥವಾ ಜಿಲ್ಲೆ ಬಗ್ಗೆ ಸರ್ಕಾರ ಅನಾದರಣೆ ತೋರಿತೋ ಕಾರಣ ಏನೇ ಆದರೂ ನಗರ-ಪಟ್ಟಣಗಳು ಅಭಿವೃದ್ಧಿಯಲ್ಲಿ ಮತ್ತೈದು ವರ್ಷ ಹಿಂದಕ್ಕೆ ದೂಡಲ್ಪಟ್ಟಿವೆ.
ಕನಕಪುರ ಕೊಂಚ ವಾಸಿ: ಜಿಲ್ಲೆ ಮಟ್ಟಿಗೆ ಇದ್ದುದರಲ್ಲಿ ಕನಕಪುರ ಪಟ್ಟಣ ವ್ಯಾಪ್ತಿಯಲ್ಲಿ ಒಂದಷ್ಟು ಯೋಜನೆಗಳು ಅನುಷ್ಠಾನಗೊಂಡಿವೆ. ಇಲ್ಲಿ ಸ್ಥಳೀಯ ಶಾಸಕರ ಇಚ್ಛಾಶಕ್ತಿ ಪ್ರಮುಖವಾಗಿದೆ. ರಾಮನಗರ, ಚನ್ನಪಟ್ಟಣದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಕ್ರಮವಾಗಿ ಬಹು ಮಹಡಿ ವಾಣಿಜ್ಯ ಸಂಕೀರ್ಣ, ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಅಡಿಗಲ್ಲಿಗೆ ಕೊನೆಯಾಗಿದೆ.
ರಾಮನಗರದಲ್ಲಿ ಭೂ ಮಾಫಿಯಾ ಹಾವಳಿ: ಎಚ್.ಡಿ.ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ಹರಿದು ಬಂದ ಅನುದಾನದಿಂದ ರಾಮನಗರದ ಚಿತ್ರಣ ಬದಲಾಗಿತ್ತು. ಕಳೆದ 5 ವರ್ಷದಿಂದ ಜೆಡಿಎಸ್ ಆಡಳಿತದಲ್ಲಿ ನಗರಸಭೆ ಭೂ ಮಾಫಿಯಾ ಮುಷ್ಟಿಗೆ ಸಿಲುಕಿ, ಅರಾಜಕತೆಗೆ ದೂಡಲ್ಪಟ್ಟಿದೆ. ದೂರದೃಷ್ಟಿತ್ವದ ಯಾವುದೇ ಯೋಜನೆಗಳು ಸಾಕಾರಗೊಂಡಿಲ್ಲ. ಕಿರಿದಾದ ರಸ್ತೆ, ಅನೈರ್ಮಲ್ಯದ ವಾತಾವರಣ ಕಂಡರೆ ಖಂಡಿತ ಇದೊಂದು ಜಿಲ್ಲಾ ಕೇಂದ್ರ ಎನಿಸುವುದೇ ಇಲ್ಲ.
ಕುಮಾರಸ್ವಾಮಿ ನಾಮಬಲದೊಂದಿಗೆ ಅಧಿಕಾರ ಹಿಡಿದ ಜೆಡಿಎಸ್ ನಾಲ್ವರು ಅಧ್ಯಕ್ಷರನ್ನು ಬದಲಿಸಿದೆ. ಅಧಿಕಾರಕ್ಕೆ ಬಂದ ವರ್ಷದಲ್ಲೇ ಪ್ರಾರಂಭವಾದ ಪಕ್ಷಾಂತರ ಕಡೆಯವರೆಗೂ ಮುಂದುವರೆಯಿತು.
ಬೊಂಬೆಯ ನಗರಿಗೆ ಸಿಗಲಿಲ್ಲ ಹೈಟೆಕ್ ಸ್ಪರ್ಶ: ಚನ್ನಪಟ್ಟಣ ನಗರವು ಅವ್ಯವಸ್ಥೆಗಳ ಆಗರ. ಸಮಸ್ಯೆಗಳ ಸರಮಾಲೆಯನ್ನೇ ಹಾಸಿ-ಹೊದ್ದುಕೊಂಡಿರುವ ಆ ನಗರಕ್ಕೆ ಹೈಟೆಕ್ ಸ್ಪರ್ಶ ನೀಡುವ ಪ್ರಯತ್ನ ಕಳೆದ 5 ವರ್ಷದಿಂದ ಆಗಿಲ್ಲ. ಸಂಸದ ಮತ್ತು ಶಾಸಕರೂ ಚನ್ನಪಟ್ಟಣ ನಗರವನ್ನು ಕಡೆಗಣಿಸಿರುವ ಆರೋಪಕ್ಕೆ ತುತ್ತಾಗಿದ್ದಾರೆ.
ಕನಕಪುರದಲ್ಲಿ ಮುಗಿಯದ ಒಳಚರಂಡಿ ಗೋಳು: ಒತ್ತಡಕ್ಕೆ ಮಣಿಯದೆ ರಸ್ತೆ ಅಗಲೀಕರಣ, ಬಡಬಗ್ಗರಿಗೆ 3200 ನಿವೇಶನಗಳ ಹಂಚಿಕೆ, ರಸ್ತೆಗಳ ಡಾಂಬರೀಕರಣ ಸಹಿತ ವಿವಿಧ ಯೋಜನೆಗಳು ಪ್ರಸಕ್ತ 5 ವರ್ಷದಲ್ಲಾಗಿವೆ. ಆದರೆ, ದಶಕದಿಂದ ಕಾಡುತ್ತಿರುವ ಒಳಚರಂಡಿ ಗೋಳು ಮಾತ್ರ ಮುಗಿದಿಲ್ಲ.
ಬೆಂಗಳೂರಿನ ಮಗ್ಗುಲಲ್ಲಿರುವ ಕನಕಪುರವನ್ನು ಕೇಂದ್ರ ಸರ್ಕಾರ ಸ್ಯಾಟಲೈಟ್ ಟೌನ್ ಆಗಿ ಘೋಷಿಸಿದೆ. ಕೇಂದ್ರ ಪುರಸ್ಕೃತ ಯೋಜನೆಯಿಂದ ಅನುದಾನದ ಹೊಳೆಯೇ ಹರಿದು ಬರಲಿದ್ದು, ಪಟ್ಟಣದ ಚಿತ್ರಣ ಮುಂದೆ ಬದಲಾಗಲಿದೆ. ಅಕ್ರಮ ಮತ್ತು ದುರಾಡಳಿತದ ಆರೋಪ ಇಲ್ಲೂ ಇದ್ದೇ ಇದೆ. 5 ವರ್ಷದಲ್ಲಿ ಇಬ್ಬರು ಅಧ್ಯಕ್ಷರಾಗಿದ್ದು, ಅಧಿಕಾರ ಮಾತ್ರ ಸ್ಥಳೀಯ ಶಾಸಕರ ಮುಷ್ಟಿಯಲ್ಲಿಯೇ ಇತ್ತು.
ಮಾಗಡಿಯಲ್ಲಿ ಅರೆಬರೆ ಕೆಲಸದ ದರ್ಶನ: ಬೆಂಗಳೂರು ನಿರ್ಮಾತೃ ಕೆಂಪೇಗೌಡರ ತವರು ಮಾಗಡಿಯಲ್ಲಿ ಉಳಿದೆಡೆಯಂತೆ ಇಲ್ಲೂ ಒಳಚರಂಡಿ ಕಾಟ ತಪ್ಪಿದ್ದಲ್ಲ. ಬಡಾವಣೆಗಳ ರಸ್ತೆಗಳಲ್ಲಿ ಸಂಚಾರ ನರಕಯಾತನೆಯೇ ಸರಿ. ಕುಡಿಯುವ ನೀರಿನ ಸಮಸ್ಯೆ ತೀವ್ರ ಗಂಭೀರ ಅಲ್ಲದಿದ್ದರೂ ಶಾಶ್ವತ ಯೋಜನೆ ಜಾರಿಯ ಕನಸು ಇನ್ನೂ ನನಸಾಗಿಲ್ಲ. ಹರಿದು ಬಂದ ಅನುದಾನದ ಸದ್ಬಳಕೆಯಲ್ಲಿ ವೈಫಲ್ಯ ಎದ್ದು ಕಂಡಿದೆ.
ಐದು ವರ್ಷದ ಅವಧಿಯಲ್ಲಿ ಐವರು ಅಧ್ಯಕ್ಷ ಹುದ್ದೆಗೇರಿದ್ದಾರೆ. ಚುನಾಯಿತ ಪ್ರತಿನಿಧಿಗಳು ಮತ್ತು ಗುತ್ತಿಗೆದಾರರು ಮಾಡಿಟ್ಟ ಕಾಮಗಾರಿ ಕರ್ಮಕಾಂಡವು ಸ್ಥಳೀಯ ಶಾಸಕರ ಕುತ್ತಿಗೆ ಬಿಗಿಯುತ್ತಿದೆ.
ಆಡಳಿತಾಧಿಕಾರಿಗಳ ನೇಮಕ: ಅವಧಿ ಪೂರ್ಣಗೊಂಡಿರುವ ಪೌರ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ರಾಮನಗರ ನಗರಸಭೆಗೆ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ, ಚನ್ನಪಟ್ಟಣ ನಗರಸಭೆಗೆ ಉಪ ವಿಭಾಗಾಧಿಕಾರಿ ಡಾ.ಸ್ನೇಹ, ಕನಕಪುರ ಪುರಸಭೆಗೆ ತಹಸೀಲ್ದಾರ್ ಡಾ.ದಾಕ್ಷಾಯಿಣಿ, ಮಾಗಡಿ ಪುರಸಭೆಗೆ ತಹಸೀಲ್ದಾರ್ ಡಾ.ಬಿ.ಆರ್.ಹರೀಶ್ ನಾಯಕ್ ಆಡಳಿತಾಧಿಕಾರಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement