ಮುತ್ಯಾಲಮ್ಮ ದೇಗುಲದಲ್ಲಿ ಲಕ್ಷ ದೀಪೋತ್ಸವ
ವಿಜಯಪುರ: ಇಲ್ಲಿಗೆ ಸಮೀಪದ ಚಿಕ್ಕನಹಳ್ಳಿ ಗ್ರಾಮದಲ್ಲಿ ಪುರಾತನ ದೇವಾಲಯವಾದ ಮುತ್ಯಾಲಮ್ಮ ದೇವಿ ದೇವಸ್ಥಾನದಲ್ಲಿ 28ನೇ ವರ್ಷದ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಪ್ರತಿ ವರ್ಷ ಭರತ ಹುಣ್ಣಿಮೆಯ ದಿನ ಪೂಜಾ ಕಾರ್ಯಕ್ರಮ ನಡೆಯಲಿದ್ದು, ಸೋಮವಾರ 25ರಂದು ಬೆಳಿಗ್ಗೆ 5ಘಂಟೆಗೆ ಅಮ್ಮನವರಿಗೆ ಅಭಿಷೇಕ, 10ರಿಂದ12 ಘಂಟೆಗೆ ಮಹಾಮಂಗಳಾರತಿ, ಪೂಜೆ , ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ 12ರಿಂದ ರಾತ್ರಿ7ರವರೆಗೆ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6 ಗಂಟೆಗೆ ಊರಿನ ಹೆಣ್ಣು ಮಕ್ಕಳಿಂದ ದೀಪಾರಾಧನೆ, ಪಂಡಿತರಿಂದ ಹರಿಕಥೆ, ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಾ.3ಕ್ಕೆ ಯಾದವ ಮಹಾ ಸಮಾವೇಶ
ಸೂಲಿಬೆಲೆ: ಬೆಂಗಳೂರಿನ ಕೆ.ಆರ್. ಪುರ ಬಳಿ ಮಾ.3 ರಂದು ನಡೆಯಲಿರುವ ಯಾದವ ಮಹಾ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕುಲಭಾಂದವರು ಪಾಲ್ಗೊಳ್ಳುವಂತೆ ಹೊಸಕೋಟೆ ತಾಲೂಕು ಯಾದವ ನೌಕರರ ಸಂಘದ ಶಿಕ್ಷಕ ಸೂಲಿಬೆಲೆ ಜಯರಾಮಯ್ಯ ಮನವಿ ಮಾಡಿದ್ದಾರೆ. ಬೆಂಗಳೂರು ಸಮೀಪದ ಕೆ.ಆರ್. ಪುರ ಬಳಿಯ ದೇವಸಂದ್ರ ಮುಖ್ಯ ರಸ್ತೆಯ ಅಯ್ಯಪ್ಪ ಸರ್ಕಲ್ ಎಸ್.ಇ.ಎ ವಿದ್ಯಾಸಂಸ್ಥೆಗಳ ವಿವಿಧೋದ್ದೇಶ ಸಭಾಂಗಣದಲ್ಲಿ ಮಹಾ ಸಮಾವೇಶ ನಡೆಯಲಿದ್ದು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಸಮುದಾಯದವರು ಪಾಲ್ಗೊಳ್ಳಲು ತಿಳಿಸಲಾಗಿದೆ.