ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಾಲಾ ಫಲಕದಲ್ಲಿ ರಾರಾಜಿಸುತ್ತಿದೆ ಮಾಜಿಗಳ ಹೆಸರು

Parashurama
Updated On : 1 Mar 2013, 12:02 pm

ರಾಮನಗರ: ರಾಷ್ಟ್ರಪತಿ, ಮುಖ್ಯಮಂತ್ರಿ ಬದಲಾಗಿ ತಿಂಗಳುಗಳೇ ಉರುಳಿವೆ. ಅರಣ್ಯ ಮಂತ್ರಿಯೂ ಪದತ್ಯಾಗ ಮಾಡಿದ್ದಾರೆ. ಇಷ್ಟಾಗಿಯೂ ಇಲ್ಲೊಂದು ಶಾಲೆಯ ಫಲಕದಲ್ಲಿ ಮಾಜಿಗಳ ಹೆಸರೇ ರಾರಾಜಿಸುತ್ತಿವೆ.
ಕಲುಷಿತ ಆಹಾರ ಇಲ್ಲವೇ ನೀರು ಸೇವನೆಯಿಂದ ಮಕ್ಕಳ ಅಸ್ವಸ್ಥತೆ ಪದೇ ಪದೇ ಕಾಡುತ್ತಿರುವ ನಗರದ ಐಜೂರು ಬಡಾವಣೆಯ ಮೊರಾರ್ಜಿ ವಸತಿ ಶಾಲೆಯಲ್ಲಿ ಇಂತಹ ಫಲಕ ಕಂಡು ಬಂದಿದೆ.
ಮಕ್ಕಳ ಬೌದ್ಧಿಕ ಮಟ್ಟದ ಜತೆಗೆ ಸಾಮಾನ್ಯ ಜ್ಞಾನ ಹೆಚ್ಚಿಸುವುದು ಶಿಕ್ಷಕರ ಹೊಣೆ. ಆದರೆ, ಇಲ್ಲಿ ಶಿಕ್ಷಕರಿಗೇ ಸಾಮಾನ್ಯ ಜ್ಞಾನದ ಕೊರತೆ ಅಥವಾ ಸೋಂಬೇರಿತನಕ್ಕೆ ಈ ಫಲಕ ಸಾಕ್ಷಿಯಾಗಿದೆ.
ರಾಷ್ಟ್ರಪತಿಯಾಗಿ ಪ್ರಣಬ್ ಮುಖರ್ಜಿ, ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್ ಆಯ್ಕೆ ತಿಂಗಳುಗಟ್ಟಲೆ ಮೊದಲೇ ಆಗಿದೆ. ಆದರೆ, ಫಲಕದಲ್ಲಿನ್ನೂ ರಾಷ್ಟ್ರಪತಿ ಹುದ್ದೆ ಮುಂದೆ ಪ್ರತಿಭಾ ಪಾಟೀಲ್, ಮುಖ್ಯಮಂತ್ರಿ ಹುದ್ದೆಯಲ್ಲಿ ಡಿ.ವಿ.ಸದಾನಂದಗೌಡ ಹೆಸರಿದೆ. ಇದೇ ಜಿಲ್ಲೆಯ ಸಿ.ಪಿ. ಯೋಗೇಶ್ವರ್ ಸಚಿವ ಹುದ್ದೆಗೆ ರಾಜಿನಾಮೆ ನೀಡಿ, ಕಾಂಗ್ರೆಸ್ ಸೇರ್ಪಡೆ ಶಾಸ್ತ್ರವನ್ನೂ ಮುಗಿಸಿದ್ದಾರೆ. ಇಷ್ಟಾಗಿಯೂ ಅರಣ್ಯ ಸಚಿವ ಸ್ಥಾನದ ಮುಂದೆ ಯೋಗೇಶ್ವರ್ ಹೆಸರು ಇನ್ನೂ ಇದೆ.
ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷ ಶಿವರಾಜೇಗೌಡ ಸದರಿ ಶಾಲೆಗೆ ಭೇಟಿ ನೀಡಿದ್ದ ವೇಳೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳು ಫಲಕ ಕಂಡು ಹೌಹಾರಿದರು. ರಾಷ್ಟ್ರಪತಿ, ಮುಖ್ಯಮಂತ್ರಿ ಯಾರೆಂಬ ಪ್ರಶ್ನೆಗೆ ಮಕ್ಕಳು ಫಲಕದಲ್ಲಿದ್ದಂತೆಯೇ ಉತ್ತರಿಸಿ ಬೇಸ್ತು ಬೀಳಿಸಿದರು.
ಖಾಲಿ ಖಾಲಿ: ಸರಿಯೋ ತಪ್ಪೋ ಕೆಲವೇ ಹುದ್ದೆಗಳ ಮುಂದೆ ಹೆಸರು ಹಾಕಲಾಗಿತ್ತು. ಆರೋಗ್ಯ ಸಚಿವ, ಸ್ಥಳೀಯ ಶಾಸಕ, ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಹುದ್ದೆಗಳ ಮುಂದೆ ಹೆಸರೇ ಇರಲಿಲ್ಲ. ಹೆಸರು ಗೊತ್ತಿಲ್ಲವೋ ಅಥವಾ ಬೇಕಂತಲೇ ಬಿಟ್ಟಿದ್ದಾರೋ ತಿಳಿಯದಾಗಿದೆ.
ಮೊರಾರ್ಜಿ ವಸತಿ ಶಾಲೆಗಳು ಜಿ.ಪಂ. ಅಧೀನದಲ್ಲಿ ನಡೆಯುತ್ತಿವೆ. ಇಷ್ಟಾಗಿಯೂ ಅಲ್ಲಿನ ವರಿಷ್ಠರ ಹೆಸರನ್ನೇ ಫಲಕದಲ್ಲಿ ನಮೂದಿಸಿಲ್ಲ. ನಿನ್ನೆಯಷ್ಟೇ ಜಿ.ಪಂ. ಸಿಇಒ ಡಾ.ವೆಂಕಟೇಶ್ ಭೇಟಿ ನೀಡಿದ್ದರು. ಆದರೆ, ಮತ್ತೊಂದು ಫಲಕದಲ್ಲಿ ಹಿಂದಿನ ಸಿಇಒ ವೆಂಕಟೇಶಪ್ಪ ಹೆಸರೇ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments