'ಅಂಬಿಗರ ಚೌಡಯ್ಯರ ಸಾಹಿತ್ಯ ಸಾರ್ವಕಾಲಿಕ ಸತ್ಯ'
ರಾಮನಗರ: ಶರಣ ಅಂಬಿಗರ ಚೌಡಯ್ಯ ಅವರ ವಚನ ಸಾಹಿತ್ಯ ಸಾರ್ವಕಾಲಿಕ ಸತ್ಯ. ಅವರ ಸಂದೇಶದಂತೆ ಸ್ವಾರ್ಥ ತೊರೆದು ಸಮಾಜದ ಹಿತದ ಬಗ್ಗೆ ಚಿಂತಿಸುವಂತೆ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಕರೆ ನೀಡಿದರು.
ಕಂದಾಯ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೋಮವಾರ ನಡೆದ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಅವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಸರಳ ಜೀವನ ಮತ್ತು ಭಕ್ತಿಯ ಮಾರ್ಗದ ಮೂಲಕ ಸಮಾಜದ ಸುಧಾರಣೆಗೆ ಚೌಡಯ್ಯ ಹೋರಾಡಿದರು. ನಾನು, ನನ್ನದು, ನನಗಾಗಿ ಎನ್ನುವ ಸ್ವಾರ್ಥ ಬಿಟ್ಟು ಸಮಾಜದ ಹಿತಕ್ಕಾಗಿ ಚಿಂತಿಸಬೇಕೆನ್ನುವ ಅವರ ಸಂದೇಶವನ್ನು ನಾವೆಲ್ಲರೂ ಪಾಲಿಸಬೇಕು ಎಂದರು.
ಚಾಟಿ ಏಟಿನ ಮಾತು: ಬಸವಣ್ಣ ನೇತೃತ್ವದಲ್ಲಿ ನಡೆದ ಸಾಮಾಜಿಕ ಕ್ರಾಂತಿಯಲ್ಲಿ ಅಂಬಿಗರ ಚೌಡಯ್ಯ ಅವರ ಪಾತ್ರ ಮಹತ್ತರವಾದುದು. ತಮ್ಮ ಚಾಟಿ ಏಟಿನಂತಹ ಮಾತುಗಳು, ವೈಚಾರಿಕ ಸಂದೇಶ ಸಾರುವ ವಚನದಿಂದ ಚೌಡಯ್ಯ ಮಹಾ ಅನುಭಾವಿಯಾಗಿದ್ದಾರೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿ.ಎಚ್.ರಾಜಶೇಖರ್ ಹೇಳಿದರು.
ಸುಮಾರು 200ಕ್ಕೂ ಹೆಚ್ಚು ವಚನಗಳನ್ನು ರಚಿಸಿರುವ ಚೌಡಯ್ಯ ಅವರು ಸ್ವಾರ್ಥ, ದುರಾಸೆ, ಲೋಭ, ಮೋಹ, ಮದ, ಮತ್ಸರ, ಅವಗುಣಗಳನ್ನು ತೊಡೆದು ಹಾಕಬೇಕೆನ್ನುವ ಸಂದೇಶ ನೀಡಿ ಹೋಗಿದ್ದಾರೆ. ನಡೆಸುವ ವೃತ್ತಿಯಲ್ಲೇ ಶಿವ ಸಾಕ್ಷಾತ್ಕಾರವನ್ನು ಮಾಡಿಕೊಂಡರು. ದೇಗುಲ ಕಟ್ಟುವುದರಿಂದ ಪ್ರಾಕೃತಿಕ ಸಂಪತ್ತು ಹಾಳಾಗುತ್ತದೆ ಎಂದ ಅಪರೂಪದ ಶಿವ ಶರಣ ಅವರಾಗಿದ್ದರು ಎಂದರು.
ಪ್ರಸ್ತುತ ಸಮಾಜ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಸ್ವಾರ್ಥ ತಾಂಡವಾಡುತ್ತಿದೆ. ವೈಯಕ್ತಿಕ ಬದುಕು ಕಟ್ಟಿಕೊಳ್ಳಲು ಎಲ್ಲರೂ ಮುಂದಾಗಿದ್ದು, ದೇಶ ಕಟ್ಟುವವರು ಇಲ್ಲದಂತಾಗಿದೆ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಸಾಬಾನ್ ಸಾಬ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದೇವರಾಜು ಭಾಗವಹಿಸಿದ್ದರು.