ಅಣ್ಣೇಶ್ವರ ಗ್ರಾಪಂಗೆ ಉತ್ತರ ಪ್ರದೇಶ ಪಂಚಾಯತ್ ರಾಜ್ ಸಚಿವರ ಭೇಟಿ
ದೇವನಹಳ್ಳಿ: ನಿರ್ಮಲ ಗ್ರಾಮ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ದೇವನಹಳ್ಳಿ ತಾಲೂಕು ಅಣ್ಣೇಶ್ವರ ಗ್ರಾಮ ಪಂಚಾಯಿತಿಗೆ ಉತ್ತರ ಪ್ರದೇಶ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಬಲರಾಮ್ ಯಾದವ್ ಸೋಮವಾರ ಭೇಟಿ ನೀಡಿದ್ದರು.
ಸಚಿವರನ್ನು ಪಂಚಾಯಿತಿ ಅಧ್ಯಕ್ಷರಾದ ಎ. ಚಂದ್ರಶೇಖರ್, ಪಿಡಿಒ ಗೋಪಾಲಯ್ಯ ಹಾಗೂ ಸದಸ್ಯರು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಈ ಭಾಗದಲ್ಲಿ ಪ್ರಮುಖವಾಗಿ ತರಕಾರಿ ಹೂವು ಬೆಳೆಯುತ್ತಿದ್ದು ಹೈನುಗಾರಿಕೆ ಇಲ್ಲಿನ ಜನರ ಜೀವನವಾಗಿದೆ. ಅಲ್ಲದೆ ಪ್ರಮುಖವಾಗಿ ಇಲ್ಲಿ ಯಾವುದೇ ಶಾಶ್ವತ ನೀರಾವರಿ ಯೋಜನೆ ಇಲ್ಲದೆ ಕೇವಲ ಕೊಳವೆ ಬಾವಿಗಳ ನೀರನ್ನು ನಂಬಿ ಜನರು ಜೀವನ ಸಾಗಿಸುತ್ತಿದ್ದಾರೆ ಎಂದು ಪಿಡಿಒ ಗೋಪಾಲಯ್ಯ ಮಾಹಿತಿ ನೀಡಿದರು.
ಪಂಚಾಯಿತಿಗೆ ಸೇರಿದ ಎಲ್ಲ ಮನೆಗಳಿಗೆ ಕಸ ಸಂಗ್ರಹಿಸಲು ಪ್ರತ್ಯೇತ ಪ್ಲಾಸ್ಟಿಕ್ ಬಕೆಟ್ಗಳನ್ನು ನೀಡಲಾಗಿದೆ ಎಂದು ಪಂಚಾಯಿತಿ ಅಧ್ಯಕ್ಷರಾದ ಎ.ಚಂದ್ರಶೇಖರ್ ತಿಳಸಿ ಪಂಚಾಯಿತಿ ಸಮೀಪ ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ ಅಲ್ಲದೆ ಎರೆಹುಳುಗೊಬ್ಬರ ತಯಾರಿಸುವ ಘಟಕ ಸ್ಥಾಪಿಸಲಾಗಿದೆ ಎಂದರು.
್ಲ ಸಚಿವರಾದ ಬಲರಾಮ್ ಯಾದವ್ ಮಾತನಾಡಿ ಇಲ್ಲಿನ ಪಂಚಾಯಿತಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಪಂಚಾಯತ್ ರಾಜ್ ಉದ್ದೇಶಗಳು ಸಾರ್ಥಕವಾಗುತ್ತಿದೆ ಎಂದು ತಿಳಿಸಿದರಲ್ಲದೆ ಪಂಚಾಯಿತಿಯವರು ನಿರ್ಮಿಸಿರುವ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದರು. ಸಚಿವರೊಂದಿಗೆ ಉತ್ತರ ಪ್ರದೇಶ ಸರ್ಕಾರ ಪಂಚಾಯತ್ರಾಜ್ ಇಲಾಖೆ ಜಂಟಿ ನಿರ್ದೇಶಕರಾದ ಸೂದಂ ಚಂಡೋಲ, ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ ನಿರ್ದೇಶಕರಾದ ಪಿ.ಕುಮಾರ್, ಪಂಚಾಯತ್ ರಾಜ್ ಇಲಾಖೆ ಸಾರ್ವಜನಿಕ ಸಂಪಾರ್ಕಾಧಿಕಾರಿ ಮಹಾನ್ ಕಾಳಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುನಿರಾಜು ಹಾಗೂ ತಾಲೂಕು ಪಂಚಾಯಿತಿ ಇಒ ಎಂ.ಆಂಜಿನಪ್ಪ ಉಪಸ್ಥಿತರಿದ್ದರು.