ಬೋರ್ವೆಲ್ ಪುನಶ್ಚೇತನಕ್ಕೆ ಮುಂದಾಗಿ
ರಾಮನಗರ: ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ಯೋಜನೆ ರೂಪಿಸಲು ಆದ್ಯತೆ ನೀಡಬೇಕು. ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸುವ ಬದಲು ಹಾಲಿ ಇರುವ ಬೋರ್ವೆಲ್ಗಳ ಪುನಶ್ಚೇತನಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹಮದ್ ಸನಾವುಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಅಭಾವ ಎದುರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.
ಅಭಾವ ನೀಗಿಸಲು ಕ್ರಮ: ರಾಮನಗರ ಜಿಲ್ಲೆಯ ಮೇವು ಉತ್ಪಾದನಾ ಗುರಿ 4.60 ಲಕ್ಷ ಟನ್ ಆಗಿದ್ದು, 2.26 ಲಕ್ಷ ಟನ್ ಮಾತ್ರವೇ ಉತ್ಪಾದನೆಯಾಗಿದೆ. ಎದುರಾಗಿರುವ ಮೇವಿನ ಅಭಾವವನ್ನು ನೀಗಿಸಲು ನಿಟ್ಟಿನಲ್ಲಿ ಕೃಷಿ, ರೇಷ್ಮೆ ಕೃಷಿ, ತೋಟಗಾರಿಕೆ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆಗಳ ಸಹಕಾರದೊಂದಿಗೆ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ವಿವರಿಸಿದರು.
ಅರ್ಕಾವತಿ ನದಿ ನೀರನ್ನು ಬಳಸಿಕೊಂಡು, ನದಿ ಪಾತ್ರದ ಸುಮಾರು 2 ಸಾವಿರ ಹೆಕ್ಟೇರ್ನಲ್ಲಿ ಮೇವು ಉತ್ಪಾದನೆಗಾಗಿ ರೈತರಿಗೆ ಅಗತ್ಯ ಪ್ರೋತ್ಸಾಹ ನೀಡಲು ಉದ್ದೇಶಿಸಲಾಗಿದೆ. ಪ್ರತಿ ಗ್ರಾಮದ ಕೊಳವೆ ಬಾವಿ ಆಶ್ರಿತ ಸರಾಸರಿ 5-10 ಎಕರೆ ಜಮೀನಿನಲ್ಲಿ ಮೇವು ಬೆಳೆ ಒಡ್ಡಲು ರೈತರನ್ನು ಮನವೊಲಿಸಲಾಗುವುದು. ಈ ರೀತಿ ಒಟ್ಟಾರೆ, 1.95 ಲಕ್ಷ ಟನ್ ಮೇವು ಉತ್ಪಾದನೆ ಗುರಿ ಹೊಂದಲಾಗಿದೆ ಎಂದರು.
150 ಕೋಟಿ ನಷ್ಟ: ಈ ಜಿಲ್ಲೆಯಲ್ಲಿ ವಾಡಿಕೆ ಮಳೆ ಪ್ರಮಾಣ 854 ಮಿ.ಮೀ. ಆಗಿದ್ದು, 2011ರಲ್ಲಿ 544 ಮಿ.ಮೀ. ಮಳೆಯಾಗಿದೆ. ಶೇ.35ರಷ್ಟು ಮಳೆ ಕೊರೆಯಿಂದಾಗಿ ಆಹಾರ ಉತ್ಪಾದನೆಯೂ ಕುಸಿದಿದೆ. 1.15 ಲಕ್ಷ ಟನ್ ಆಹಾರ ಉತ್ಪಾದನೆ ಗುರಿ ಹೊಂದಲಾಗಿದೆ. 64 ಸಾವಿರ ಟನ್ ಉತ್ಪಾದನೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ಅಂದಾಜು 150 ಕೋಟಿಯಷ್ಟು ಬೆಳೆ ನಷ್ಟವಾಗಿದೆ ಎಂದು ಕಣಷಿ ಇಲಾಖೆ ಜಂಟಿ ನಿರ್ದೇಶಕ ಅಣ್ಣಯ್ಯ ವಿವರಿಸಿದರು.
ಜಿಲ್ಲಾದ್ಯಂತ 410 ಎಕರೆ ತೋಟಗಾರಿಕೆ ಫಾರಂ ಇದ್ದು, ಈ ಪೈಕಿ ಲಭ್ಯವಿರುವ 40 ಎಕರೆಯಲ್ಲಿ ಮೇವು ಬೆಳೆ ಉತ್ಪಾದನೆಗೆ ಉದ್ದೇಶಿಸಲಾಗಿದೆ. ಫಾರಂಗಳಲ್ಲಿ ಪೈಪ್ಲೈನ್ ಅಳವಡಿಸಿದ್ದು, ತೀರಾ ಅಗತ್ಯವಿರುವೆಡೆ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸಲು ಕ್ರಮ ಕೈಗೊಳ್ಳಬೇಕಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ. ಬಿ.ಕೃಷ್ಣ ಅವರು ವಿವರಣೆ ನೀಡಿದರು.
ಯೋಜನೆಗೆ ಅನುಮೋದನೆ: ಮೇವು ಉತ್ಪಾದನೆ ಸಂಬಂಧ ಈಗಾಗಲೇ ಕ್ರಿಯಾ ಯೋಜನೆಯೊಂದನ್ನು ರೂಪಿಸಲಾಗಿದೆ. ಇದಕ್ಕಾಗಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ತಲಾ 2 ಕೋಟಿ, ಪಶು ಸಂಗೋಪನಾ ಇಲಾಖೆಗೆ 1.50 ಕೋಟಿ, ವನ್ಯ ಜೀವಿಗಳಿಗೆ ಮೇವು, ನೀರು ಒದಗಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಗೆ 10 ಕೋಟಿ ಅನುದಾನ ನೀಡಲು ಅನುಮೋದನೆ ದೊರೆತಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸಿದ್ದರಾಮಯ್ಯ ಹೇಳಿದರು.
ಸಮಸ್ಯಾತ್ಮಕ ಗ್ರಾಮಗಳು: ಜಿಲ್ಲಾದ್ಯಂತ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿರುವ 129 ಗ್ರಾಮಗಳನ್ನು ಗುರ್ತಿಸಿದ್ದು, ಅಂತಹ ಕಡೆ ಹಾಲಿ ಇರುವ ಕೊಳವೆ ಬಾವಿಗಳ ಪುನಶ್ಚೇತನ ಮತ್ತು ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸುವುದು ಸೇರಿದಂತೆ ಸಾಧ್ಯವಾದ ಮಟ್ಟಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ವೇಣುಗೋಪಾಲ್ ತಿಳಿಸಿದರು.
ಚನ್ನಪಟ್ಟಣ ತಾಲೂಕಿನಲ್ಲಿ ನೀರಿನ ಬವಣೆ ಅಧಿಕವಾಗಿವೆ. ಅಲ್ಲಿನ ಸಂತೆಮೊಗಳ್ಳಿಯಲ್ಲಿ 14 ಕೊಳವೆ ಬಾವಿಗಳನ್ನು ಕೊರೆದಿದ್ದರೂ ನೀರು ಸಿಕ್ಕಿಲ್ಲ. ಹೀಗಾಗಿ, ಸನಿಹದಲ್ಲೇ ಹಾದು ಹೋಗಿರುವ ರಾಮನಗರ-ಚನ್ನಪಟ್ಟಣ ನಗರಗಳ ಕಾವೇರಿ ಪೈಪ್ಲೈನ್ನಿಂದ ನೀರು ಪೂರೈಸಬೇಕೆನ್ನುವ ತಾ.ಪಂ. ಇಒ ಕೋರಿಕೆಗೆ ಸನಾವುಲ್ಲಾ ಸಕಾರಾತ್ಮಕವಾಗಿ ಸ್ಪಂದಿಸಿದರು.
ನಗರ-ಪಟ್ಟಣಗಳ ಸಮಸ್ಯೆ: ಕನಕಪುರ ಪಟ್ಟಣಕ್ಕೆ ಕಾವೇರಿ ಕುಡಿಯುವ ನೀರಿನ ಲಭ್ಯತೆ ಪ್ರಮಾಣವನ್ನು ಮಾಸಾಂತ್ಯದಿಂದ ಕಡಿತಗೊಳಿಸುವುದಾಗಿ ಬೆಂಗಳೂರು ಜಲ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಪುರಸಭೆ ಮುಖ್ಯಾಧಿಕಾರಿ ಮಾಯಪ್ಪ ಹೇಳಿದರು.
ಚನ್ನಪಟ್ಟಣಕ್ಕೆ 7.5 ಎಂ.ಎಲ್.ಡಿ. ನೀರಿನ ಪೂರೈಕೆ ಸಾಕಾಗುತ್ತಿದೆ. ರಾಮನಗರಕ್ಕೆ 8.5 ಎಂ.ಎಲ್.ಡಿ. ನೀರು ಪೂರೈಸುತ್ತಿದ್ದರೂ ಸಮಸ್ಯೆ ಗಂಭೀರವಾಗಿದೆ ಎಂದು ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಇಇ ಪಾಷ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸನಾವುಲ್ಲಾ, ನೀರಿನ ಪೂರೈಕೆಯಲ್ಲಿ ರಾಮನಗರಕ್ಕೆ ಅನ್ಯಾಯವಾಗುತ್ತಿದೆ. ಶೀಘ್ರವೇ ಮೀಟರ್ ಅಳವಡಿಸಬೇಕು ಎಂದು ನಿರ್ದೇಶನ ನೀಡಿದರು.
ಇತರೆ ಸೂಚನೆಗಳು: ನೀರು, ಮೇವಿನ ಅಭಾವ ನೀಗಿಸುವ ಕುರಿತು ಪ್ರತಿ ವಾರಕ್ಕೊಮ್ಮೆ ಡಿಸಿ ಅಧ್ಯಕ್ಷತೆಯಲ್ಲಿ ಸಭೆ ನಡೆಸುವುದು. ತಹಸೀಲ್ದಾರ್ ಕಚೇರಿಗಳಲ್ಲಿ ಕಡತ ವಿಲೇವಾರಿ ವಿಳಂಬ ಕುರಿತು ಎಸಿ ನೇತೃತ್ವದ ತಂಡದಿಂದ ಪರಿಶೀಲನೆ, ಷರತ್ತಿಗೆ ಒಳಪಟ್ಟು ನಡೆಸಲಾಗುತ್ತಿರುವ ಕ್ರಮಗಳನ್ನು ಸುರಕ್ಷಿತ ವಲಯವೆಂದು ಘೋಷಿಸುವ ಮೂಲಕ ಹಾಲಿ ಇರುವೆಡೆಯೇ ಮುಂದುವರಿಯಲು ಅವಕಾಶ ನೀಡಬೇಕು ಎಂದು ಸನಾವುಲ್ಲ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಇತರರು ಭಾಗವಹಿಸಿದ್ದರು.