ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ (ಸುದ್ದಿ ಸಂಕ್ಷೇಪ)
ರಾಮನಗರ: ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಕೆಂಚನಕುಪ್ಪೆ ಮತ್ತು ಬನ್ನಿಕುಪ್ಪೆ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನಾ ಸಮಾರಂಭ ನಾಳೆ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಕಾರ್ಯಕ್ರಮವನ್ನು ಸಂಸದ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸುವರು. ಕಾಕರಾಮನಹಳ್ಳಿಯ ಹೌಸಿಂಗ್ ಬೋರ್ಡ್ ಕಾಮಗಾರಿಗೆ ವಸತಿ ಸಚಿವ ಸೋಮಣ್ಣ ಗುದ್ದಲಿ ಪೂಜೆ ನೆರವೇರಿಸುವರು. ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ರೇಣುಕಾಚಾರ್ಯ, ಸಚಿವ ಯೋಗೇಶ್ವರ್ ಇತರರು ಭಾಗವಹಿಸುವರು. ಶಾಸಕ ಎಚ್.ಸಿ. ಬಾಲಕೃಷ್ಣ ಅಧ್ಯಕ್ಷತೆ ವಹಿಸುವರು.
ಅಸಾಧಾರಣ ಸೇವೆ: ಅರ್ಜಿ ಆಹ್ವಾನ
ರಾಮನಗರ: ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ ಮೂವರು ಮತ್ತು ಐದು ಸಂಸ್ಥೆಗಳಿಗೆ ಕೇಂದ್ರ ಸರ್ಕಾರದಿಂದ ಪ್ರಶಸ್ತಿ ನೀಡಲಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ವ್ಯಕ್ತಿಗತ ಪ್ರಶಸ್ತಿಯು ರು.1 ಲಕ್ಷ ನಗದು, ಪ್ರಶಸ್ತಿ ಫಲಕವನ್ನು ಮತ್ತು ಸಂಸ್ಥೆಗೆ ನೀಡುವ ಪ್ರಶಸ್ತಿಯು ರು.3 ಲಕ್ಷ ನಗದು ಒಳಗೊಂಡಿದೆ. ವೇತನ ಪಡೆಯುತ್ತಿರುವವರು ಈ ಪ್ರಶಸ್ತಿಗೆ ಅರ್ಹರಾಗಿರುವುದಿಲ್ಲ. ಪ್ರಶಸ್ತಿಯನ್ನು ನ.14ರಂದು ನಡೆಯುವ ವಿಶ್ವ ಮಕ್ಕಳ ದಿನಾಚರಣೆ ದಿನ ಪ್ರದಾನ ಮಾಡಲಾಗುವುದು. 2012 ಮತ್ತು 2013ನೇ ಸಾಲಿನಲ್ಲಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ರಾಷ್ಟ್ರ ಪ್ರಶಸ್ತಿಗಾಗಿ ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಜಿಲ್ಲಾ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಮನಗರ. ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಫೆ.28ರೊಳಗೆ ಸಲ್ಲಿಸಬೇಕು.
ಕೆ.ಪಿ.ಜೆ.ಪ್ರಭು, ಕರಕುಶಲ ತರಬೇತಿ ಸಂಸ್ಥೆಗೆ ಪ್ರಶಸ್ತಿ
ರಾಮನಗರ: ಇಂಡಿಯನ್ ಮ್ಯೂಸಿಕ್ ಅಸೋಸಿಯೇಷನ್ ಸಂಸ್ಥೆಯಿಂದ ಪ್ರತಿ ವರ್ಷ ನೀಡುವ ಶ್ರೀ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿಯು ಈ ಬಾರಿ ಕೆನರಾ ಬ್ಯಾಂಕ್ ಪ್ರಾಯೋಜಿತ ಕೆ.ಪಿ.ಜೆ.ಪ್ರಭು, ಕರಕುಶಲ ತರಬೇತಿ ಸಂಸ್ಥೆಗೆ ಲಭಿಸಿದೆ. ಬೆಂಗಳೂರಿನಲ್ಲಿ ನಡೆದ ಸಂಗೀತೋತ್ಸವ ಸಮಾರಂಭದಲ್ಲಿ ಸಂಸ್ಥೆಯ ಪರವಾಗಿ ಕೆನರಾ ಬ್ಯಾಂಕ್ನ ಉಪ ಪ್ರಧಾನ ವ್ಯವಸ್ಥಾಪಕ ಸುನಿಲ್ ಕುರ್ತುಕೋಟಿ ಹಾಗೂ ಸಂಸ್ಥೆಯ ನಿರ್ದೇಶಕ ಎಂ.ವೆಂಕಟೇಶ ಶೇಷಾದ್ರಿ ಅವರು ಖ್ಯಾತ ಹಿಂದೂಸ್ಥಾನಿ ಗಾಯಕಿ ಶ್ಯಾಮಲಾ ಜಿ.ಭಾವೆ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಬಿಡದಿ ಬಳಿ ಜೋಗದೊಡ್ಡಿಯಲ್ಲಿ 21 ವರ್ಷಗಳಿಂದ ಸಾಂಪ್ರದಾಯಿಕ ಶಿಲ್ಪ ಕಲೆ ತರಬೇತಿ ನೀಡುತ್ತಿರುವ ಈ ಸಂಸ್ಥೆಯು ಈವರೆಗೆ ಸುಮಾರು 690 ಯುವಕ, ಯುವತಿಯರಿಗೆ ತರಬೇತಿ ನೀಡಿದೆ.