ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕನ್ನಡದ ಸ್ವಂತಿಕೆ, ಪ್ರಜ್ಞೆ ನಿರಂತರವಾಗಿರಲಿ

Parashurama
Updated On : 24 Jan 2013, 12:25 pm

ದೇವನಹಳ್ಳಿ: ಕನ್ನಡದ ಜನ ಎಲ್ಲೇ ಇರಲಿ ಯಾವುದೇ ವೃತ್ತಿ ಮಾಡುತ್ತಿರಲಿ ಕನ್ನಡದ ಸ್ವಂತಿಕೆ ಮತ್ತು ಕನ್ನಡ ಪ್ರಜ್ಞೆ ಉಳಿಸಿಕೊಳ್ಳಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಜಿ.ವಿಜಯಕುಮಾರ್ ಅಧ್ಯಕ್ಷ ಭಾಷಣದಲ್ಲಿ ಕಿವಿಮಾತು ಹೇಳಿದರು.
ಕನ್ನಡವನ್ನು ವಿಶೇಷವಾಗಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುವವರಿಗೆ ಸರ್ಕಾರದ ಪ್ರೋತ್ಸಾಹ ದೊರೆಯಬೇಕು. ಮಾತ್ರವಲ್ಲ, ಕನ್ನಡ ಭಾಷಾ ಸಾಹಿತ್ಯ ಬೆಳಸುವ ಉದ್ದೇಶದಿಂದ ಸರ್ಕಾರ ಕೆಲವು ಹುದ್ದೆಗಳನ್ನು ಸೃಷ್ಟಿಸಬೇಕು ಮತ್ತು ಕೆಎಎಸ್, ಐಎಎಸ್, ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಕನ್ನಡದಲ್ಲೇ ಬರೆಯುವಂತೆ ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ದೇವನಹಳ್ಳಿ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ 19ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ತ.ಪು.ವೆಂಕಟರಾಂ ವೇದಿಕೆಯಲ್ಲಿ ಬುಧವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿತ್ತು. ಕನ್ನಡಿಗರು ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಚಾಳಿಯನ್ನು ಬೆಳಸಿಕೊಳ್ಳಬೇಕು ಇದರಿಂದ ಕನ್ನಡ ಪ್ರಕಾಶನ ಇನ್ನಷ್ಟು ಬೆಳೆಯಲು ಸಾಧ್ಯ ಎಂದು ಸಮ್ಮೇಳನಾಧ್ಯಕ್ಷರು ತಿಳಿಸಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರು ಉದ್ಯೋಗಗಳಿಂದ ವಂಚಿತರಾಗಬಾರದು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿ ನಮ್ಮ ಸಂಸ್ಕೃತಿ ಇತಿಹಾಸ ಬೆಳಸಿ ನೆಲ ಜಲ ಸಂರಕ್ಷಿಸುವ ಸಂಕಲ್ಪ ಎಲ್ಲ ಕನ್ನಡಿಗರಿಗೆ ಅಲ್ಲದೆ, ಸರ್ಕಾರದ ಗಮನಕ್ಕೆ ಬಂದರೆ ಸಮ್ಮೇಳನದ ಉದ್ದೇಶ ಸಾರ್ಥಕವಾಗುತ್ತದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, ಕನ್ನಡ ಭಾಷೆ ನಮ್ಮ ರಾಜ್ಯದ ಹೆಬ್ಬಾಗಿಲಾಗಬೇಕು. ಇತರ ಭಾಷೆಗಳು  ರಾಜ್ಯದ ಕಿಟಕಿಗಳಾಗಬೇಕು ಎಂದರಲ್ಲದೆ ಅನೇಕ ಶಾಲೆಗಳಲ್ಲಿ ಕನ್ನಡದಲ್ಲಿ ಮಾತನಾಡಿದರೆ ದಂಡ ವಿಧಿಸುವ ರೂಢಿ ಇಂದಿಗೂ ಇದೆ. ಇದು ಖಂಡನೀಯ ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕೇವಲ ಸರ್ಟಿಫಿಕೆಟ್‌ಗಾಗಿ ಸೀಮಿತಗೊಳಿಸಿದರೆ ಬಂಧು-ಬಾಂಧವರ ನಡುವೆ ಭಾವನಾತ್ಮಕ ಸಂಬಂಧಗಳಿಂದ ದೂರವಾಗಿ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ ಎಂದರಲ್ಲದೆ, ಕನ್ನಡ ಪರ ಸಂಘಟನೆಗಳು ಒಂದಾಗಿ ದನಿ ಎತ್ತಿದರೆ  ಜಿಲ್ಲೆ ಉಳಿಯುತ್ತದೆ ಎಂದರು.
ಇದೇ ಸಂಧರ್ಭದಲ್ಲಿ ಶಾಸಕ ಎಂ. ವೆಂಕಟಸ್ವಾಮಿ ಅವರು ಎನ್.ಶ್ರೀನಿವಾಸಮೂರ್ತಿ ಅವರ 'ಮುಗುಳು' ಕವನ ಸಂಕಲನ ಬಿಡುಗಡೆ ಮಾಡಿ ದೇವನಹಳ್ಳಿಯಲ್ಲಿ 12 ವರ್ಷಗಳ ನಂತರವಾದರೂ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅಭಿನಂದನೀಯ ಎಂದರಲ್ಲದೆ ನಮ್ಮ ನಾಡು ನುಡಿ ಸಂಸ್ಕೃತಿ ಪರೆಪರೆ ಬೆಳೆಯಬೇಕಾದರೆ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಶಿಕ್ಷಣ ನೀಡಬೇಕು ಎಂದರಲ್ಲದೆ ದೇವನಹಳ್ಳಿಯಲ್ಲಿ ಕನ್ನಡ ಭವನಕ್ಕಾಗಿ ನಿವೇಶನ ಅಲ್ಲದೆ ಕಟ್ಟಡ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
   ತಹಸೀಲ್ದಾರ್ ಎಲ್.ಸಿ.ನಾಗರಾಜ್‌ರವರು ಮಾತನಾಡಿ,  ಸಮ್ಮೇಳನದಲ್ಲಿ ಭಾಗವಹಿಸುವುದರಿಂದ ಪಠ್ಯೇತರ ವಿಷಯಗಳನ್ನು ಅರಿಯಲು ಸಾಧ್ಯ ಎಂದರಲ್ಲದೆ, ಕನ್ನಡ ಭಾಷೆ ಉಳಿದರೆ ಮಾತ್ರ ವಿವಿಧ ರಾಜ್ಯಗಳಲ್ಲಿನ ಜನಭಾಷೆ (ಆಡುಭಾಷೆ) ಉಳಿಯಲು ಸಾಧ್ಯ ಎಂದರು. ಮಾಜಿ ಪುರಸಭಾಧ್ಯಕ್ಷ ಎಸ್.ಲಕ್ಷ್ಮೀನಾರಾಯಣ್, ಜಿ ಪಂ ಸದಸ್ಯ  ಬಿ.ರಾಜಣ್ಣ, ರಾಜ್ಯ ಬಿಜೆಪಿ ಮುಖಂಡರಾದ ಎಂ.ನಾರಾಯಣಗೌಡ,  ಕೆ.ನಾಗೇಶ್ ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್ ದತ್ತಿ ನಿಧಿಗಾಗಿ ಶಾಸಕ ವೆಂಕಟಸ್ವಾಮಿ, ಎಂ.ನಾರಾಯಣಗೌಡ, ಕೆ.ನಾಗೇಶ್ ತಲಾ ರು. 25 ಸಾವಿರ ದೇಣಿಗೆ ನೀಡಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜ್ ಪ್ರಕಟಿಸಿದರು.
ಎ.ಸಿ.ಗುರುಸ್ವಾಮಿ ಎಲ್ಲರಿಗೂ ಸ್ವಾಗತ ಕೋರಿದರು, ಯಾ.ಚಿ.ದೊಡ್ಡಯ್ಯ ಪ್ರಾಸ್ತಾವಿಕ ಭಾಷಣ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments