ವಿರೋಧಿಗಳಿಂದ ನೀರಾವರಿ ಯೋಜನೆಗೆ ಅಡ್ಡಿ
ಚನ್ನಪಟ್ಟಣ: ನನ್ನ ರಾಜಕೀಯ ವಿರೋಧಿಗಳು ತಾಲೂಕಿನ ಸಮಗ್ರ ನೀರಾವರಿ ಯೋಜನೆಗೆ ಅಡ್ಡಿಪಡಿಸುತ್ತಿದ್ದು ಯಾರು ಎಷ್ಟೇ ಷಡ್ಯಂತ್ರ ನಡೆಸಿದರು ಈ ಯೋಜನೆ ನಿಲ್ಲುವುದಿಲ್ಲ ಎಂದು ಸಚಿವ ಯೋಗೇಶ್ವರ್ ಸ್ಪಷ್ಟಪಡಿಸಿದರು.
ತಾಲೂಕಿನ ಸುಳ್ಳೇರಿ ಅವ್ವೇರಹಳ್ಳಿ ಜೋಡಿ ಕೆರೆಗಳಿಗೆ ಬಾಗಿನ ಅರ್ಪಿಸಿ ಮಾತನಾಡಿ, ನನ್ನ ರಾಜಕೀಯ ವಿರೋಧಿಗಳು ಎಷ್ಟೇ ಪಿತೂರಿ ಮಾಡಿದರೂ ತಾಲೂಕಿನ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವ ಕಾರ್ಯವನ್ನು ತಡೆಯಲು ಸಾಧ್ಯವಿಲ್ಲ ಎಂದರು.
ಕಣ್ವ ಏತನೀರಾವರಿ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು ಎಲ್ಲಾ ಪ್ರಕ್ರಿಯೆಗಳು ಮುಗಿದಿವೆ, ಭೂಸ್ವಾದೀನ ಪ್ರಕ್ರಿಯೆಗೂ ಚಾಲನೆ ದೊರೆತಿದ್ದು ರಾಜಕೀಯ ವಿರೋಧಿಗಳಿಗೆ ಇದೇ ಉತ್ತರ ಎಂದರು.
ಕಣ್ವ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಮುಂದಿನ ತಿಂಗಳ ಮೊದಲ ವಾರದಲ್ಲಿ ಆರಂಭಿಸಲಿದ್ದು, 7 ರಿಂದ 8 ಕಡೆ ಪೂಜೆ ನಡೆಸಿ ಕಾಮಗಾರಿಗೆ ತ್ವರಿತ ಚಾಲನೆ ನೀಡುವ ಜತೆಗೆ ಮುಂದಿನ ವರ್ಷದೊಳಗೆ ಕಾಮಗಾರಿಯನ್ನು ಪೂರ್ಣ ಗೊಳಿಸುವುದಾಗಿ ಸಚಿವರು ಸ್ಪಷ್ಟ ಪಡಿಸಿದರು. ಬಿಜಿಎಸ್ ಏತನೀರಾವರಿ ಯೋಜನೆ: ತಾಲೂಕಿನ ಮಹತ್ವಾಕಾಂಕ್ಷಿ ಕಣ್ವ ಏತ ನೀರಾವರಿ ಯೋಜನೆಗೆ ಜಗದ್ಗುರು ಆದಿ ಚುಂಚನಗಿರಿ ಶ್ರೀಗಳ ಹೆಸರನ್ನು ನಾಮಕರಣ ಮಾಡಲಿದ್ದು ಸದ್ಯದಲ್ಲೇ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ದೊರೆಯಲಿದೆ ಎಂದುತಿಳಿಸಿದರು.
6 ತಿಂಗಳಲ್ಲಿ ಸಂಕಲಗೆರೆಗೆ ನೀರು: ತಾಲೂಕಿನ ಸಂಕಲ ಗೆರೆ ಗ್ರಾಮದ ಕೆರೆಗೆ ನೀರು ಪೂರೈಕೆ ಮಾಡುವ ಕಾರ್ಯಕ್ಕೆ ಇಂದು ಭೂಮಿ ಪೂಜೆ ನೆರವೇರಿಸಿದ್ದು ಮುಂದಿನ 6 ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಳಿಸಲಿರುವುದಾಗಿ ಸಚಿವರು ಭರವಸೆ ನೀಡಿದರು.
ಕೆಲ ತಾಂತ್ರಿಕ ಅಡಚಣೆಯಿಂದಾಗಿ ಈ ಕಾಮಗಾರಿ ವಿಳಂಬಗೊಂಡಿದ್ದು ಈ ಕಾಮಗಾರಿಯಿಂದಾಗಿ ಸಂಕಲಗೆರೆ, ಚಕ್ಕೆರೆ, ಗಂಗೇದೊಡ್ಡಿ ಸೇರಿದಂತೆ 8 ಕೆರೆಗಳಿಗೆ ಅನುಕೂಲವಾಗಲಿದ್ದು ಈ ಯೋಜನೆಯ ಮೂಲಕ ಮತ್ತಷ್ಟು ಕೆರೆಗಳನ್ನು ಜೀವಂತ ಗೊಳಿಸಲು ಶ್ರಮಿಸುವುದಾಗಿ ಸಚಿವರು ಭರವಸೆ ನೀಡಿದರು.
ಗರಕಹಳ್ಳಿ ಏತನೀರಾವರಿ ಯೋಜನೆ ಭಾಗಶಃ ಪೂರ್ಣ ಗೊಂಡಿದ್ದು ಈ ಕಾಮಗಾರಿಯನ್ನು ಮತ್ತಷ್ಟು ಪರಿಪೂರ್ಣ ಗೊಳಿಸುವ ಕಾರ್ಯ ನಡೆಸುವುದಾಗಿ ತಿಳಿಸಿದ ಅವರು, ರೈತರು ನೀರನ್ನು ವೈಜ್ಞಾನಿಕವಾಗಿ ಬಳಸಿಕೊಳ್ಳ ಬೇಕಿದೆ ಎಂದು ಕರೆ ನೀಡಿದರು.
ಕಟ್ಟಡ ಕಟ್ಟುವುದೇ ಅಭಿವೃದ್ಧಿಯಲ್ಲ: ನಾನು ಮಧುಗಿರಿಯ ಬಗ್ಗೆ ಮಾತನಾಡುವುದಿಲ್ಲ. ಆದರೆ ಕುಮಾರಸ್ವಾಮಿ ಪಕ್ಕದ ರಾಮನಗರ ಕ್ಷೇತ್ರದಲ್ಲಿ ಏನು ಮಾಡಿದ್ದಾರೆ, ಕೇವಲ ನಾಲ್ಕು ಕಟ್ಟಡಗಳನ್ನು ಕಟ್ಟಿಸಿ ಅಭಿವೃದ್ಧಿ ಎಂದು ಬಿಂಬಿಸುತ್ತಿದ್ದು ಅಲ್ಲಿನ ಜನತೆಯ ಭವಣೆ ಹೇಳತೀರದಾಗಿದೆ ಎಂದು ಲೇವಡಿ ಮಾಡಿದರು.
ಮಧುಗಿರಿಯಲ್ಲಿ ಏನು ಮಾಡಿದ್ದಾರೆ, ಅಲ್ಲಿನ ಅಭಿವೃದ್ಧಿಯ ಕೆಲಸಗಳೇನು, ಅವರೇಕೆ ಅಲ್ಲಿಂದ ಇಲ್ಲಿಗೆ ಓಡಿ ಬಂದಿದ್ದಾರೆ ಎಂಬುದನ್ನು ಬೇರೆ ವೇದಿಕೆಯಲ್ಲಿ ಹೇಳುತ್ತೇನೆ, ಇದು ರಾಜಕೀಯ ವೇದಿಕೆಯಲ್ಲ ನೀರಾವರಿ ವಿಚಾರದಲ್ಲಿ ನಾನು ರಾಜಕೀಯ ಬೆರಸುವುದಿಲ್ಲ ಎಂದರು.
ಮಾರ್ದನಿಸಿದ ನಿವೃತ್ತಿ: ಸುಳ್ಳೇರಿ ಗ್ರಾಮದ ಭಾಗಿನೋತ್ಸವ ಸಮಾರಂಭದಲ್ಲೂ ಯೋಗೇಶ್ವರ್ ರಾಜಕೀಯ ನಿವೃತ್ತಿ ವಿಚಾರ ಮಾರ್ದನಿಸಿತು.
ನೀರಾವರಿ ಬಗ್ಗೆ ಮಾತನಾಡುತ್ತಿದ್ದ ಸಚಿವರನ್ನ ಈ ಬಗ್ಗೆ ಕೆಲ ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಿದಾಗ ಈ ಬಗ್ಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಚರ್ಚಿಸಿ ನಿರ್ಧರಿಸುವುದಾಗಿ ತಿಳಿಸಿದರು.
ನನಗೆ ಒಂದೇ ಊರು ಒಂದೇ ಕ್ಷೇತ್ರ. ನಾನು ಎಲ್ಲೂ ಹೋಗಲ್ಲ, ನನಗೆ ಮಂಡ್ಯ ಸೇರಿದಂತೆ ಬೇರೆ ಕ್ಷೇತ್ರದ ಜನತೆ ನಮ್ಮಲ್ಲಿಗೆ ಬನ್ನಿ ಎಂದು ಆಹ್ವಾನಿಸುತ್ತಿದ್ದಾರೆ. ಆದರೆ ಅಲ್ಲಿಗಿಲ್ಲಿಗೆ ವಲಸೆ ಹೋಗುವ ಜಾಯಮಾನ ನನ್ನದಲ್ಲ, ಈ ತಾಲೂಕಿನ ಜನತೆಯ ಜತೆಗೆ ನನ್ನದೊಂದು ಅವಿನಾಬಾವ ಸಂಬಂಧವಿದೆ ಅದನ್ನು ಯಾವುದೇ ಕಾರಣಕ್ಕೂ ಮುರಿದು ಕೊಳ್ಳುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಕೆ.ಪುಟ್ಟಸ್ವಾಮಯ್ಯ, ಎಸ್.ಸಿ ಶೇಖರ್, ಸಿಂಗರಾಜಪುರ ರಾಜಣ್ಣ, ಹುಲುವಾಡಿ ಶಿವಕುಮಾರ್, ತಿಮ್ಮೇಶ್ ಪ್ರಭು ಮುಂತಾದವರು ಉಪಸ್ಥಿತರಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.