ದೇಶ ಕಟ್ಟಲು ಸಂಕಲ್ಪ ತೊಟ್ಟಾಗ ಭವ್ಯ ಭಾರತದ ನಿರ್ಮಾಣ ಸಾಧ್ಯ: ಡಾ.ಕೃಷ್ಣೇಗೌಡ
ಚನ್ನಪಟ್ಟಣ: ಗಾಂಧಿಕನಸಿನ ರಾಮರಾಜ್ಯ, ಅಂಬೇಡ್ಕರ್ ಆಶಯದ ಜಾತ್ಯತೀತ ದೇಶ ಕಟ್ಟಲು ದೇಶದ ಪ್ರತಿಯೊಬ್ಬ ಪ್ರಜೆಯೂ ಸಂಕಲ್ಪ ತೊಟ್ಟಾಗ ಭವ್ಯ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಪ್ರಾಧ್ಯಾಪಕ ಡಾ. ಕೃಷ್ಣೇಗೌಡ ತಿಳಿಸಿದರು.
ಪಟ್ಟಣದ ಬಾಲಕರ ಕಾಲೇಜು ಮೈದಾನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿ ಕೊಂಡಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ದೇಶದ ಬಗ್ಗೆ ಸಮಗ್ರ ಚಿಂತನೆ ನಡೆಸಿದ ಡಾ. ಅಂಬೇಡ್ಕರ್ ವಿಶ್ವದ ಎಲ್ಲಾ ದೇಶಗಳು ಒಪ್ಪುವಂತಹ ಸಂವಿಧಾನವನ್ನು ನಮಗೆ ನೀಡಿದ್ದು ಅದನ್ನು ಅನುಷ್ಠಾನಕ್ಕೆ ತರುವ ಕೆಲಸವನ್ನು ನಾವೆಲ್ಲ ಮಾಡಬೇಕಿದೆ ಎಂದು ತಿಳಿಸಿದರು.
ನಮ್ಮ ಸಂವಿಧಾನ ಜಾರಿಗೆ ಬಂದು ವರ್ಷಗಳು ಕಳೆದಿವೆಯಾದರೂ ಸಂವಿಧಾನದ ಆಶಯಗಳು ಎಷ್ಟರ ಮಟ್ಟಿಗೆ ಜಾರಿಯಾಗಿವೆ ಎಂದು ಪರಾಮರ್ಶಿಸುವ ಪರಿಸ್ಥಿತಿ ಎದುರಾಗಿದೆ. ಸಮಾನತೆಯನ್ನು ನಮ್ಮ ಸಂವಿಧಾನ ಎತ್ತಿ ಹಿಡಿದಿದೆಯಾದರೂ ಪ್ರತಿಯೊಂದು ಕ್ಷೇತ್ರದಲ್ಲೂ ಅಸಮಾನತೆ, ಜಾತಿ ಹೆಸರಿನಲ್ಲಿ ಒಡೆದು ಹೋಗಿರುವ ವ್ಯವಸ್ಥೆ ನಮನ್ನು ಅಣಕಿಸುತ್ತಿದೆ ಎಂದು ವಿಷಾದಿಸಿದರು.
ಇನ್ನಾದರೂ ದೇಶದ ಪ್ರಜ್ಞಾವಂತ ಸಮುದಾಯ ನಾಡುಕಟ್ಟುವ ಕೆಲಸಕ್ಕೆ ಮುಂದಾಗಬೇಕು. ದೇಶವನ್ನು ಕಿತ್ತು ತಿನ್ನುತ್ತಿರುವ ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸಿ ಭ್ರಾತೃತ್ವ ಭಾವನೆಯೊಂದಿಗೆ ಸದೃಢ ಸಮಾಜ ನಿರ್ಮಿಸಲು ಸಂಕಲ್ಪ ಮಾಡಬೇಕೆಂದು ಅವರು ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ರಘುಕುಮಾರ್ ಮಾತನಾಡಿ, ಗಣ ರಾಜ್ಯೋತ್ಸವ ಕೇವಲ ಆಚರಣೆಗೆ ಮಾತ್ರ ಸೀಮಿತವಾಗುತ್ತಿದ್ದು ನಮ್ಮ ದೇಶದ ಸಂವಿಧಾನದ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಅರಿವು ಮೂಡಿಸುವ ಕೆಲಸ ನಡೆಯಬೇಕಿದೆ, ಕೇಂದ್ರ ಸ
ಸಂಶಯವಿಲ್ಲ: ಸರ್ಕಾರ ಸಂವಿಧಾನದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ಕೆ ಮುಂದಾಗಬೇಕೆಂದು ತಿಳಿಸಿದರು. ನಗರಸಭೆ ಅಧ್ಯಕ್ಷೆ ರೇಷ್ಮಾಬಾನು ಮಾತನಾಡಿ, ನಮ್ಮ ದೇಶ ಜಗತ್ತಿಗೆ ಮಾದರಿ ಯಾಗಿದ್ದು ವಿವಿಧತೆಯಲ್ಲಿ ಏಕತೆ ಸಾರುವ ಮನೋಭಾವನ್ನು ನಾವೆಲ್ಲ ಬೆಳೆಸಿಕೊಂಡಿದ್ದೇ ಅದಲ್ಲಿ ಅಬ್ದುಲ್ಕಲಾಂ ಹೇಳಿದಂತೆ 2020ರ ವೇಳೆಗೆ ಭವ್ಯ ಭಾರತ ನಿರ್ಮಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ತಹಸೀಲ್ದಾರ್ ಅರುಣಪ್ರಭ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು. ಶಾಲೆಯ ವಿದ್ಯಾರ್ಥಿಗಳಿಂದ ಹಾಗೂ ಪೊಲೀಸರಿಂದ ಧ್ವಜವಂದನೆ ಸ್ವೀಕರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ರಾಜೇಶ್ ಕೊಂಡಾಪುರ, ನಗರಸಭೆ ನಿರೀಕ್ಷಕ ಬಸವರಾಜು, ಕ್ರಿಕೆಟ್ ಆಟಗಾರ ಪ್ರಕಾಶ್ರನ್ನು ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಅಭಿನಂದಿಸಲಾಯಿತು.
ತಾ.ಪಂ.ಅಧ್ಯಕ್ಷೆ ಶಾಂತಮ್ಮ, ನಗರಸಭೆ ಉಪಾಧ್ಯಕ್ಷ ಕೆ.ಎಲ್.ಕುಮಾರ್, ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಕ್ಷೇತ್ರಶಿಕ್ಷಣಾಧಿಕಾರಿ ಶಿವಪ್ಪ, ನಗರಸಭೆ ಸದಸ್ಯ ಪುರುಷೋತ್ತಮ್, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.