ಬೆಳೆ ನಷ್ಟಕ್ಕೆ ನೀಡಿರುವ ಪರಿಹಾರ ಮೊತ್ತ ಅವೈಜ್ಞಾನಿಕ
ರಾಮನಗರ: 2011-12 ಸಾಲಿನಲ್ಲಿ ಸಂಭವಿಸಿದ ಬೆಳೆ ನಷ್ಟಕ್ಕೆ ನೀಡಿರುವ ಪರಿಹಾರ ಮೊತ್ತ ಅವೈಜ್ಞಾನಿಕವಾಗಿದೆ ಮತ್ತು ಅದನ್ನು ಪಾವತಿಸುವಲ್ಲಿ ಕೃಷಿ ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು, ಸದಸ್ಯರು ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.
ಜಿಲ್ಲಾಧ್ಯಕ್ಷ ಲಕ್ಷ್ಮಣಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆಯ ಸದಸ್ಯರು ಅಧಿಕಾರಿಗಳ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸೂಕ್ತ ಮಾಹಿತಿ ಒದಗಿಸುವಲ್ಲಿ ವಿಫಲರಾದ ಅಧಿಕಾರಿಗಳ ಧೋರಣೆಯಿಂದ ಮತ್ತಷ್ಟು ಕೆರಳಿದ ಅವರು ಕಚೇರಿ ಬಾಗಿಲು ಮುಚ್ಚಿ, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ತರಬೇತಿ ಕಾರ್ಯಕ್ರಮಕ್ಕೆ ತೆರಳಿದ್ದ ಜಂಟಿ ಕೃಷಿ ನಿರ್ದೇಶಕ ಅಣ್ಣಯ್ಯ ಅವರು ಪ್ರತಿಭಟನಾಕಾರರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಸೂಕ್ತ ಮಾಹಿತಿ ಒದಗಿಸುವ ಮೂಲಕ ಸಮಾಧಾನಪಡಿಸಲು ಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ. ಬಳಿಕ ಸಹಾಯಕ ಕೃಷಿ ನಿರ್ದೇಶಕ ನಾಗರಾಜಯ್ಯ ಕೂಡ ಪ್ರತಿಭಟನಾಕಾರರು ಕೋರಿದ ಮಾಹಿತಿಗಳನ್ನು ನೀಡುವಲ್ಲಿ ವಿಫಲರಾದರು.
ರೈತರು ಮುಂದಿಟ್ಟ ಪ್ರಶ್ನೆಗಳು: ರೈತರಿಗೆ ನೀಡುತ್ತಿರುವ ಪರಿಹಾರವನ್ನು ಯಾವ ಮಾನದಂಡದ ಮೇಲೆ ನೀಡಲಾಗುತ್ತಿದೆ ಪ್ರತಿ ರೈತನಿಗೆ ಎಷ್ಟು ಹಣ ಸಂದಾಯ ಮಾಡುವಿರಿ ಎಂಬಿತ್ಯಾದಿ ಪ್ರಶ್ನೆಗಳನ್ನಷ್ಟೇ ರೈತರು ಮುಂದಿಟ್ಟರು. ಕಚೇರಿಯಲ್ಲಿದ್ದ ಅಧಿಕಾರಿಗಳ ಪೈಕಿ ಒಬ್ಬರು ನೀಡುವ ಮಾಹಿತಿಗೆ ಮತ್ತೊಬ್ಬರು ನೀಡುವ ಮಾಹಿತಿ ತಾಳೆಯಾಗುತ್ತಲೇ ಇರಲಿಲ್ಲ. ಪರಿಹಾರ ಯೋಜನೆ ವಿಷಯದಲ್ಲಿ ಅಧಿಕಾರಿಗಳೇ ಗೊಂದಲಕ್ಕೆ ಸಿಲುಕಿರುವುದು ಇಲ್ಲಿ ಸ್ಪಷ್ಟವಾಯಿತು.
2011-12ನೇ ಸಾಲಿನಲ್ಲಿ ಬೆಳೆನಷ್ಟಕ್ಕಾಗಿ ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿಯ ಸಣ್ಣ, ಅತಿ ಸಣ್ಣ ರೈತರಿಗೆ ಚೆಕ್ ಮೂಲಕ ಪರಿಹಾರ ನೀಡಲಾಗುತ್ತಿದೆ. ಚನ್ನಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ಕಾಲೇಜು ವಿದ್ಯಾರ್ಥಿನಿಯರಿಂದ ಚೆಕ್ ಬರೆಸಲಾಗುತ್ತಿದೆ. ಈ ಬಗ್ಗೆ ವಿಚಾರಿಸಿದರೆ ಸಮರ್ಪಕ ಉತ್ತರ ನೀಡದೆ ಕಣಷಿ ಅಧಿಕಾರಿ ಅಳುತ್ತಾ ನಿಲ್ಲುತ್ತಾರೆ ಎಂದು ರೈತ ಮುಖಂಡರು ಆರೋಪಿಸಿದರು.
ಕವಡೆ ಕಾಸಿನ ಪರಿಹಾರ: ಕೃಷಿ ಅವಲಂಬಿತ ಪ್ರತಿ ರೈತನಿಗೆ ಕನಿಷ್ಠ ರು.250ರಿಂದ ಗರಿಷ್ಠ ರು.1 ಸಾವಿರ, ತೋಟಗಾರಿಕೆಗೆ ಗರಿಷ್ಠ ರು.2 ಸಾವಿರದಂತೆ ಪರಿಹಾರ ನೀಡಲು ಸರ್ಕಾರಿ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಈ ಜಿಲ್ಲೆಯಲ್ಲಿ ಅದನ್ನು ಪಾಲಿಸುತ್ತಿಲ್ಲ. ಬದಲಾಗಿ ಪ್ರತಿ ಗುಂಟೆ ಜಮೀನಿಗೆ ರು.10ರಂತೆ ಪರಿಹಾರ ನೀಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ನಿದರ್ಶನದೊಂದಿಗೆ ದೂರಿದರು.
ಅಧಿಕಾರಿಗಳ ಜಂಟಿ ತಂಡವು ಪರಿಶೀಲನೆ ನಡೆಸಿ, ರೈತರನ್ನು ಆಯ್ಕೆ ಮಾಡಬೇಕಿದೆ. ಆದರೆ, ಈ ವಿಷಯದಲ್ಲಿ ಅಧಿಕಾರಿಗಳು ಕುಳಿತಲ್ಲೇ ಪಟ್ಟಿ ಅಖೈರುಗೊಳಿಸುತ್ತಿದೆ. ರೈತರಿಗೆ ರು.10 ರಿಂದ ರು.200ರವರೆಗೆ ಭಿಕ್ಷೆ ರೂಪದಲ್ಲಿ ಪರಿಹಾರದ ಚೆಕ್ ನೀಡಲಾಗುತ್ತಿದೆ. ಅದಕ್ಕೊಂದು ಖಾತೆ ತೆರೆದು, ಹಣ ಪಡೆಯುವಂತಹ ಸ್ಥಿತಿ ತಂದೊಡ್ಡಿರುವುದು ನಾಚಿಕೆಗೇಡಿನ ಸಂಗತಿ. ರೈತರನ್ನು ನಡೆಸಿಕೊಳ್ಳುವ ಪರಿ ಇದೆಯೇ ಎಂದು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.
ಫನಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿಲ್ಲ. ಈ ವಿಷಯವಾಗಿ ಮಾಧ್ಯಮಗಳು, ಕರಪತ್ರ, ಇನ್ಯಾವುದೇ ರೀತಿಯಲ್ಲಿ ಮಾಹಿತಿ ಪ್ರಚುರಪಡಿಸುವ ಕೆಲಸವಾಗಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತವೂ ಕಣ್ಮುಚ್ಚಿ ಕುಳಿತಿದೆ. ಸೂಕ್ತ ಕ್ರಮ ಕೈಗೊಳ್ಳದ ಹೊರತು ಪ್ರತಿಭಟನೆ ಅಂತ್ಯಗೊಳಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಜಿ.ಪಂ. ಅಧ್ಯಕ್ಷ ಭೇಟಿ: ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿ.ಪಂ. ಅಧ್ಯಕ್ಷ ಮುದ್ದುರಾಜಾ ಯಾದವ್ ಅವರು ಬರ ಪರಿಹಾರ ವಿತರಣೆಯಲ್ಲಾಗುತ್ತಿರುವ ಲೋಪದ ಬಗ್ಗೆ ಫೆ.1ರಂದು ಜಿಲ್ಲಾಧಿಕಾರಿ ಸಮಕ್ಷಮ ಸಭೆ ನಡೆಸಿ, ಸರಿಪಡಿಸುವ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಅಂತ್ಯಗೊಂಡಿತು. ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಮುಖಂಡ ಸಿ.ಪುಟ್ಟಸ್ವಾಮಿ, ಕೃಷ್ಣಪ್ಪ, ಕುಮಾರ್, ನಂಜಪ್ಪ ಇತರರು ಭಾಗವಹಿಸಿದ್ದರು.