ವೀರಾಪುರ ಸರ್ಕಾರಿ ಶಾಲೆಯಲ್ಲಿ ಗಣರಾಜ್ಯೋತ್ಸವ
ದೊಡ್ಡಬಳ್ಳಾಪುರ: ತಾಲೂಕಿನ ವೀರಾಪುರ ಸರ್ಕಾರಿ ಶಾಲೆಯಲ್ಲಿ ಗಣರಾಜ್ಯೋತ್ಸವ ಮತ್ತು ಕನಕ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀರಾಮ ಆಸ್ಪತ್ರೆ ವತಿಯಿಂದ ಶಾಲಾ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ಪಡೆದ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಪರಿಶಿಷ್ಟ ಜಾತಿ ಮತ್ತು ವರ್ಗದ ಮಕ್ಕಳಿಗೆ ಉಚಿತ ಬ್ಯಾಗ್, ಶಾಲಾ ಕ್ರೀಡಾಕೂಟದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ತಾ.ಪಂ ಸದಸ್ಯ ಡಾ.ಎಚ್.ಜಿ.ವಿಜಯಕುಮಾರ್, ತಾ.ಪಂ ಸದಸ್ಯ ಶ್ಯಾಮಲ ಲಕ್ಷ್ಮೀಪತಿ, ಮಜರಾಹೊಸಹಳ್ಳಿ ಗ್ರಾ.ಪಂ ಅಧ್ಯಕ್ಷ ಲೋಕೇಶ್, ಮುನಿಯಪ್ಪ, ಮುಖ್ಯಶಿಕ್ಷಕ ನರಸಿದೇವರು ಹಾಜರಿದ್ದರು.
ಗ್ರಾಮೀಣ ಮಕ್ಕಳಲ್ಲಿ ಕ್ರೀಡಾಶಕ್ತಿ ಹೆಚ್ಚಿದೆ
ಮಾಗಡಿ: ಗ್ರಾಮೀಣ ಮಕ್ಕಳಲ್ಲಿ ಕ್ರೀಡಾಶಕ್ತಿ ಹೆಚ್ಚಿದೆ. ಆದರೆ ಪ್ರೋತ್ಸಾಹದ ಕೊರತೆಯಿಂದ ಎಲೆ ಮರೆಯ ಕಾಯಿಯಂತೆ ಉಳಿಯುತ್ತಾರೆ ಎಂದು ಕೆಪಿಸಿಸಿ ಸದಸ್ಯ ಎ.ಮಂಜು ವಿಷಾದ ವ್ಯಕ್ತಪಡಿಸಿದರು. ಅವರು ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ಬಗಿನಗೆರೆಯ ರಸ್ತೆಪಾಳ್ಯದ ಬಳಿ ಹೊಯ್ಸಳ ಸೇನೆ ಏರ್ಪಡಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರತಿಭಾವಂತ ಯುವಕರನ್ನು ಕ್ರೀಡೆಗೆ ಒತ್ತು ನೀಡುವ ಮೂಲಕ ಪ್ರೋತ್ಸಾಹಿಸಲಾಗುವುದು. ಕ್ರೀಡೆಯಿಂದ ದೈಹಿಕವಾಗಿ ಆರೋಗ್ಯವಾಗಿರಬಹುದು. ಜೊತೆಗೆ ಮಾನಸಿಕವಾಗಿಯೂ ಸದೃಢರಾಗಬಹುದು. ಆರೋಗ್ಯವಂತ ಸಮಾಜ ನಿರ್ಮಾಣ ಆರೋಗ್ಯವಂತ ಯುವಕರಿಂದ ಮಾತ್ರ ಸಾಧ್ಯ ಎಂದರು. ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್.ಮಂಜುನಾಥ್ ಮಾತನಾಡಿ ಗ್ರಾಮೀಣ ಯುವಕರಿಗೆ ಹೆಚ್ಚು ಪ್ರೋತ್ಸಾಹ ಸಿಕ್ಕರೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದು, ದೇಶದ ಕೀರ್ತಿ ಪತಾಕೆ ಹಾರಿಸುತ್ತಾರೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಯುವಶಕ್ತಿಯನ್ನು ಪೋತ್ಸಾಹಿಸಿ ಬೆಳೆಸಬೇಕಿದೆ ಎಂದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಗಳೂರು ಗಂಗಾಧರ್, ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಬಿ.ಎಸ್. ಕುಮಾರ್, ಬಗಿನಗೆರೆ ರಂಗಸ್ವಾಮಿ, ದಂಡೇನಹಳ್ಳಿ ಗೌಡ, ರಾಮಕೃಷ್ಣಪ್ಪ, ರಂಗಸ್ವಾಮಿ, ಕಾಂತರಾಜು,ಅಜೀಂ ಉಲ್ಲಾ, ಕುದೂರು ಪುರುಷೋತ್ತಮ್, ಹೊಯ್ಸಳ ಸೇನೆ ಪದಾಧಿಕಾರಿಗಳು ಹಾಜರಿದ್ದರು.
'ಕ್ರೀಡೆ ಮಾನಸಿಕ ಬೆಳವಣಿಗೆಗೆ ಸಹಕಾರಿ'
ನೆಲಮಂಗಲ: ಕ್ರೀಡೆ ವಿದ್ಯಾರ್ಥಿಯ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್. ಮಲ್ಲಯ್ಯ ಹೇಳಿದರು. ಅವರು ತಾಲೂಕಿನ ವಾಜರಹಳ್ಳಿಯ ಥಾಮಸ್ ಮೆಮೋರಿಯಲ್ ಶಾಲೆ ಹಮ್ಮಿಕೊಂಡಿದ್ದ ಶಾಲಾ ಕ್ರೀಡೋತ್ಸವವನ್ನು ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಸಾಮಾಜಿಕ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ಶಿಕ್ಷಕರು ಅರಿವು ಮೂಡಿಸುವ ಮೂಲಕ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡಬೇಕು ಎಂದರು. ಗ್ರಾಮೀಣ ಮತ್ತು ಅಲ್ಪಸಂಖ್ಯಾತ ಹಾಗೂ ಅನಾಥ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ ಎಂದು ತಾ.ಪಂ. ಮಾಜಿ ಉಪಾಧ್ಯಕ್ಷ ಶ್ರೀನಿವಾಸ್ ತಿಳಿಸಿದರು. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಮಾತ್ರ ಕರ್ತವ್ಯವಲ್ಲ. ಅವರ ದಿನನಿತ್ಯದ ವಿದ್ಯಾಭ್ಯಾಸದ ಚಟುವಟಿಕೆ ಗಮನಿಸುವುದೇ ಮುಖ್ಯವಾಗಿದೆ ಎಂದು ಶಾಲಾ ಸಂಸ್ಥಾಪಕಿ ಸಿಸ್ಟರ್ ಜೋಸ್ನಾ ಫ್ರಾನ್ಸಿಸ್ ನುಡಿದರು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾರ್ಥಿಗಳಿಗೆ ಬಹುಮಾನ ವಿತರಿಸಿದರು.