ಶೆಟ್ಟರ್ ಬಜೆಟ್ ಮಂಡಿಸುವುದು ಶತಸಿದ್ಧ: ಸಚಿವ ಯೋಗೇಶ್ವರ್
ಚನ್ನಪಟ್ಟಣ: ಜಗದೀಶ್ ಶೆಟ್ಟರ್ ಬಜೆಟ್ ಮಂಡಿಸುವುದು ಶತಸಿದ್ಧ ಎಂದು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ವಿಠಲೇನಹಳ್ಳಿ ಗ್ರಾಮದಲ್ಲಿ ನೂತನ ಕೆರೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರ ಅವಧಿ ಪೂರೈಸುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಮೂರು ತಿಂಗಳುಗಳ ಕಾಲ ಸರ್ಕಾರ ಅಧಿಕಾರದಲ್ಲಿರುತ್ತದೆ ಎಂದು ತಿಳಿಸಿದರು. ಜನಪರ ಬಜೆಟ್ ಮಂಡನೆಗೆ ನಮ್ಮ ಸರ್ಕಾರ ಸಿದ್ಧತೆ ನಡೆಸಿದ್ದು ನಿಗದಿತ ಅವಧಿಯಲ್ಲಿ ಬಜೆಟ್ ಮಂಡನೆಯಾಗಲಿದೆ. ಈ ಬಜೆಟ್ ಮೂಲಕ ಸರ್ಕಾರದ ಜನಪರ ಯೋಜನೆಗಳು ಅನುಷ್ಠಾನಕ್ಕೆ ಬರಲಿದೆ ಎಂದು ತಿಳಿಸಿದರು.
ಶ್ರೀಗಂಧದ ವನ: ಗಂಧದನಾಡು ಎಂದು ಬಿಂಬಿತವಾಗಿದ್ದ ರಾಜ್ಯದ ಕಾಡುಗಳಲ್ಲಿ ಇದೀಗ ಹೆಸರಿಗೆ ಹುಡುಕಿ ಕೊಂಡರೂ ಗಂಧದ ಮರಗಳು ಸಿಗದಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಟೇಟ್ ಮಾದರಿಯಲ್ಲಿ ಶ್ರೀಗಂಧದ ವನ ಬೆಳೆಸುವ ಯೋಜನೆಗೆ ಇಲಾಖೆ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದರು.
ನಾಡಿನ ವಿವಿಧ ಕಾಡುಗಳಲ್ಲಿ ಎಸ್ಟೇಟ್ ಮಾದರಿಯಲ್ಲಿ ಸಾವಿರಾರು ಎಕರೆ ಭೂಮಿಯಲ್ಲಿ ಶ್ರೀಗಂಧವನ್ನು ಬೆಳೆಸಲಾಗುವುದು, ಇದು ಇಲಾಖೆಗೆ ಆದಾಯ ತರುವ ಜತೆಗೆ ನಾಡಿನ ಇತಿಹಾಸ ಮೆರೆಸುವ ಪ್ರಯತ್ನವಾಗಿದೆ ಎಂದರು.
ಜತೆಗೆ ಅರಣ್ಯ ಇಲಾಖೆಯ ಆಧುನೀಕರಣ ಮತ್ತು ಆನೆ ಹಾವಳಿ ತಡೆಗೆ ಅಗತ್ಯವಿರುವ ಸೌರಬೇಲಿ ನಿರ್ಮಾಣ ಮತ್ತು ಟ್ರಂಚ್ ಲೈನ್‌ಗಳ ನಿರ್ಮಾಣ ಕಾರ್ಯಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಕೆಎಸ್‌ಐಸಿ ಆರಂಭ: ತಾಲೂಕಿನ ಹೆಮ್ಮೆಯ ಕೈಗಾರಿಕೆ ಎನಿಸಿದ್ದ ಕೆಎಸ್‌ಐಸಿಯನ್ನು ಪುನರಾರಂಭಿಸಲು ಸರ್ಕಾರ ಮುಂದಾಗಿದ್ದು ಈ ಬಜೆಟ್‌ನಲ್ಲಿ ಸರ್ಕಾರ 11ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.
ಇದರೊಂದಿಗೆ ತಾಲೂಕಿನ ನೀರಾವರಿ ಯೋಜನೆಗಳಿಗೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡುವ ಜತೆಗೆ ಯೋಜನೆಗೆ ಯಾವುದೇ ಸಮಸ್ಯೆ ಇಲ್ಲದಂತೆ ಹಣಕಾಸು ಮೀಸಲಿರಿಸುವುದಾಗಿ ಸಚಿವರು ತಿಳಿಸಿದರು.
ಮೂರುಕೆರೆಗಳ ನಿರ್ಮಾಣ: ವಿಠಲೇನಹಳ್ಳಿ ಗೋಲಿಬಾರ್ ಮೂಲಕ ನಾಡಿನೆಲ್ಲೆಡೆ ಪ್ರಖ್ಯಾತಿ ಪಡೆದಿದ್ದ ವಿಠಲೇನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ನೀರಿನ ಕೊರತೆ ಎದ್ದು ಕಾಣುತ್ತಿದ್ದು ಈ ಭಾಗದ ರೈತರ ಬದುಕು ಶೋಚನೀಯ ಸ್ಥಿತಿ ತಲುಪಿದ್ದು ಇವರಿಗೆ ನೆರವಾಗುವ ಉದ್ದೇಶದಿಂದ 3.50 ಕೋಟಿ ರು. ವೆಚ್ಚದಲ್ಲಿ ವಿಠಲೇನಹಳ್ಳಿ, ಮೆಣಸಿಗನಹಳ್ಳಿ ಮತ್ತು ಕಾರೇಕೊಪ್ಪ ಗ್ರಾಮದಲ್ಲಿ ಹೊಸಕೆರೆಗಳ ನಿರ್ಮಾಣಕಾರ್ಯಕ್ಕೆ ಚಾಲನೆ ನೀಡುತ್ತಿರುವುದಾಗಿ ಅವರು ತಿಳಿಸಿದರು.
ಈ ಕೆರೆಗಳಿಗೆ ವಿಠಲೇನಹಳ್ಳಿ ಗೋಲೀಬಾರ್‌ನಿಂದ ಮೃತರಾದ ರೈತ ಹುತಾತ್ಮರ ಹೆಸರನ್ನು ಇಡುವುದಾಗಿ ತಿಳಿಸಿದ ಅವರು ಈ ಭಾಗದ ರೈತರಿಂದ ರಾಜಕಾರಣಿಗಳು ಸಾಕಷ್ಟು ಸಹಕಾರ ಪಡೆಸು ಕೊಂಡಿದ್ದಾರಾದರೂ ಇವರ ಬದುಕು ಹಸನು ಮಾಡಿವ ಕಾರ್ಯವನ್ನು ಮಾಡಿಲ್ಲ. ಈ ಜನತೆಗೆ ನೆರವಾಗುವ ಉದ್ದೇಶದಿಂದ ಈ ಕಾರ್ಯ ಕೈಗೊಂಡಿರುವುದಾಗಿ ಅವರು ತಿಳಿಸಿದರು. ಬಿಜೆಪಿ ಮುಖಂಡರಾದ ಸಿಂಗರಾಜಪುರ ರಾಜಣ್ಣ, ಬುಕ್ಕಸಾಗರ ಅಣ್ಣಯ್ಯಪ್ಪ, ಎಸ್.ಸಿ.ಶೇಖರ್, ತಿಮ್ಮೇಶ್ ಪ್ರಭು, ಚಕ್ಕೆರೆ ರಾಜಶೇಖರ್ ಮುಂತಾದವರು ಉಪಸ್ಥಿತರಿದ್ದರು.