ಕಾನೂನು ಪಾಲಿಸಿ ಅಪರಾಧ ತಡೆಯಿರಿ: ಭಾಸ್ಕರ್ ರಾವ್
ಆನೇಕಲ್: ಎಲ್ಲ ಪ್ರಜೆಗಳೂ ಕಾನೂನು ಪರಿಪಾಲನೆ ಮಾಡುವ ಮೂಲಕ ಸಂಕಷ್ಟಗಳಿಂದ ದೂರವಿರಿ. ಅದೇ ರೀತಿ ಅಪರಾಧಗಳನ್ನು ತಡೆಯಲು ಗೃಹಿಣಿಯರು ಹಾಗೂ ಯುವ ಜನತೆ ಎಚ್ಚರಿಕೆಯಿಂದಿರಬೇಕೆಂದು ಪೊಲೀಸ್ ಮಹಾನಿರೀಕ್ಷಕ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಅವರು ಆನೇಕಲ್ಲಿನ ಭಗತ್ ಸಿಂಗ್ ಓಪನ್ ರೋವರ್ ತಂಡದ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ಸದಸ್ಯರು ಅಪರಾಧ ನಿಯಂತ್ರಣ-ಕಾನೂನು ಪರಿಪಾಲನೆ ಜಾಗೃತಿಗಾಗಿ ಹಮ್ಮಿಕೊಂಡಿರುವ ರಾಜ್ಯ ಸೈಕಲ್ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿ ಕಾನೂನಿನ ಪ್ರಾಥಮಿಕ ಅರಿವಿದ್ದವರು ಇತರರನ್ನೂ ದೂರು ದಾವೆ ಸಂಸ್ಕೃತಿಯಿಂದ ದೂರವಿಡಬಹುದು. ತಂತ್ರಜ್ಞಾನ ಹೆಚ್ಚಿದಂತೆ ಅಪರಾಧ ಪ್ರಕರಣಗಳೂ ಹೆಚ್ಚುತ್ತಿದ್ದು ಮುನ್ನೆಚ್ಚರಿಕೆ ವಹಿಸುವ ಮೂಲಕ ತಡೆಯಬಹುದಾಗಿದೆ. ಅಪರಿಚಿತರ ಬಗ್ಗೆ ಎಚ್ಚರದಿಂದ ಇದ್ದು ಅನುಮಾನ ಬಂದಲ್ಲಿ ಸನಿಹದ ಪೊಲೀಸ್ ಠಾಣೆಗೆ ತಿಳಿಸಬೇಕು ಎಂಬ ಸಲಹೆ ನೀಡಿದರು.
ತಾವು ಗ್ರಾಮಾಂತರ ಪ್ರದೇಶದಲ್ಲಿ ಡಕಾಯಿತಿ ಹಾವಳಿ ತಡೆಯಲು ಸ್ಕೌಟ್ ಯುವಕರನ್ನು ಬಳಸಿ ಯಶಸ್ವಿಯಾಗಿ ತಡೆಗಟ್ಟಿದ ಘಟನೆಯನ್ನು ತಿಳಿಸಿ ವಿದ್ಯಾವಂತ ಯುವಕರು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಇತರ ಜನರಲ್ಲಿ ಜಾಗೃತಿ ಮೂಡಿಸಬೇಕೆಂದರು.
ಜಿಪಂ ಸದಸ್ಯ ಕೆ.ಸಿ. ರಾಮಚಂದ್ರ ಮಾತನಾಡಿ ಆನೇಕಲ್ ರೋವರ್ಸ್ ತಂಡ ಪರಿಸರ ಜಾಗೃತಿ, ಮದ್ಯಪಾನ ಜಾಗೃತಿ, ಹಸಿರು ಬೆಳೆಸಿ ಮುಂತಾದ ಜಾಗೃತಿ ಕಾರ್ಯಕ್ರಮಗಳ ಮೂಲಕ ರಾಜ್ಯಾದ್ಯಂತ ಸಂಚರಿಸಿ ಬೀದಿ ನಾಟಕ ಆಡುವ ಮೂಲಕ ಉತ್ತಮ ಸೇವೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ತಹಸೀಲ್ದಾರ್ ಶಿವೇಗೌಡ ಹಾಗೂ ಡಾ. ವೀರಭದ್ರಪ್ಪ, ವೃತ್ತ ನಿರೀಕ್ಷಕ ಕಿಶೋರ್ ಅವರು ವಿದ್ಯಾರ್ಥಿಗಳಿಗೆ ಶುಭ ಪ್ರಯಾಣ ಕೋರಿದರು. ರಾಷ್ಟ್ರೀಯ ಸ್ಕೌಟ್ ಪ್ರಶಸ್ತಿ ವಿಜೇತ ಎ.ಎನ್. ನರೇಂದ್ರಕುಮಾರ್ ಮಾಹಿತಿ ನೀಡಿ 15 ರೋವರ್ ತಂಡ 10 ದಿನಗಳ ಸೈಕಲ್ ಜಾಥಾದಲ್ಲಿ ಆನೇಕಲ್ನಿಂದ ಹೊರಟು ದೊಡ್ಡಬಳ್ಳಾಪುರ, ಹೊಸದುರ್ಗ, ಕಡೂರು, ಚಿಕ್ಕಮಗಳೂರು, ಸಕಲೇಶಪುರ, ಹಾಸನ ಯಡಿಯೂರು ಮಾರ್ಗ ಬೆಂಗಳೂರಿಗೆ ಫೆ.4ರಂದು ವಾಪಸ್ ತಲುಪುವುದಾಗಿ ತಿಳಿಸಿದರು. ಪಿಎಸ್ಸೈ ರಾಘವೇಂದ್ರ ಬೈಂದೂರು, ಸರ್ಕಾರಿ ನೌಕರರ ಸಂಘದ ಸಿ.ಆರ್. ನಾಗಭೂಷಣ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.